ಮೋಟಾರು ವಾಹನ ಕಾಯ್ದೆ ತಿದ್ದುಪಡಿಯಿಂದ ರಿಕ್ಷಾ ಚಾಲಕ, ಮಾಲಕರಿಗೆ ತೀವ್ರ ತೊಂದರೆ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಕಾರವಾರ : “ಕೇಂದ್ರ ಮೋಟಾರು ವಾಹನ ಕಾಯ್ದೆಯನ್ನು ಅವೈಜ್ಞಾನಿಕವಾಗಿ ತಿದ್ದುಪಡಿ ಮಾಡಿರುವುದರಿಂದ ರಿಕ್ಷಾ ಚಾಲಕರು ಮತ್ತು ಮಾಲಕರ ಜೀವನ ನಿರ್ವಹಣೆಗೆ ತೊಂದರೆಯಾಗಿದೆ” ಎಂದು ಜಿಲ್ಲಾ ಆಟೋ ರಿಕ್ಷಾ ಮಾಲಕರು ಹಾಗೂ ಚಾಲಕರ ಸಂಘದ ಅಧ್ಯಕ್ಷ ಆರ್ ಜಿ ನಾಯ್ಕ ಆರೋಪಿಸಿದರು.

ಪತ್ರಕರ್ತರೊಂದಿಗೆ ಮಾತನಾಡಿದ ಅವರು, “ಮೋಟಾರು ವಾಹನ ಕಾಯ್ದೆಯಲ್ಲಿ ಎಪ್ರಿಲ್ 1ರಿಂದ ಅನ್ವಯವಾಗುವಂತೆ ವಾಹನ ವಿಮಾ ಶುಲ್ಕ ಹೆಚ್ಚಿಸಲಾಗಿದೆ. ಮೊದಲೇ ಬಡತನದಲ್ಲಿರುವ ರಿಕ್ಷಾ ಚಾಲಕರು ಮತ್ತು ಮಾಲಕರಿಗೆ ವಿಮಾ ಶುಲ್ಕ ಹೆಚ್ಚಿಸಿರುವುದು ಮತ್ತಷ್ಟು ಆರ್ಥಿಕ ಹೊರೆಯಾಗಿ ಪರಿಣಮಿಸಿದೆ. ಹಾಗಾಗಿ ವಿಮಾ ಶುಲ್ಕವನ್ನು ಕಡಿಮೆ ಮಾಡಬೇಕು. ರಿಕ್ಷಾ ಚಾಲಕರು ಅಸಂಘಟಿತ ವಲಯದ ಕಾರ್ಮಿಕರಾಗಿದ್ದು ಯಾವುದೇ ಭವಿಷ್ಯ ನಿಧಿ, ವಿಮೆ, ಕ್ಷೇಮಾಭಿವೃದ್ಧಿ ನಿಧಿಯ ಸೌಲಭ್ಯಗಳು ಇಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರ ರಿಕ್ಷಾ ಚಾಲಕರ ಕ್ಷೇಮಾಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.

“ಬೇರೆ ಉದ್ಯಮಿಗಳು ರೈತರಿಗೆ ನೀಡಿದಂತೆ ರಿಕ್ಷಾ ಚಾಲಕರಿಗೆ ಇಂಧನ ಹಾಗೂ ಹೊಸ ವಾಹನ ಖರೀದಿಗೆ ಸಬ್ಸಿಡಿ ನೀಡಬೇಕು. ದೇಶದಲ್ಲಿ ಶಾಸಕನಾಗಲು ಕನಿಷ್ಠ ಶಿಕ್ಷಣ ಪಡೆದಿರಬೇಕು ಎಂಬ ಮಿತಿ ಇಲ್ಲ. ಅನಕ್ಷರಸ್ಥರೂ ಶಾಸಕನಾಗಲು ಅವಕಾಶವಿದೆ. ಆದರೆ ರಿಕ್ಷಾ ಚಾಲಕನಾಗಲು ಕನಿಷ್ಠ 8ನೇ ತರಗತಿ ಓದಿರಬೇಕು ಎಂಬ ಸರ್ಕಾರದ ನಿಯಮ ಹಾಸ್ಯಾಸ್ಪದವಾಗಿದೆ. ರಿಕ್ಷಾ ಚಾಲಕರಲ್ಲಿ ಹಿಂದುಳಿದ ಶಿಕ್ಷಣವಂಚಿತರೇ ಹೆಚ್ಚಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಇಂಥ ಅಸಂಬದ್ಧ ನಿಯಮಗಳನ್ನು ತೆಗೆದು ಹಾಕಬೇಕು” ಎಂದು ಒತ್ತಾಯಿಸಿದರು.