ಕೆಸರು ಗದ್ದೆಯಾದ ಉಪ್ಪಳ ಬಸ್ ನಿಲ್ದಾಣ ಪರಿಸರ ಆಟೋ ಚಾಲಕರಿಂದ ಶುಚೀಕರಣ

ಆಟೋ ಚಾಲಕರು ರಸ್ತೆ ಸ್ವಚ್ಛಗೊಳಿಸಿದರು

 

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಮಳೆಯ ನೀರಿಂದ ಕೆಸರು ತುಂಬಿದ ಗದ್ದೆಯಂತಾಗಿದ್ದ ರಾಷ್ಟ್ರೀಯ ಹೆದ್ದಾರಿ ಉಪ್ಪಳದ ಬಸ್ ನಿಲ್ದಾಣ ಪರಿಸರವನ್ನು ಸ್ಥಳೀಯ ಆಟೋ ಚಾಲಕರು ಜೆಸಿಬಿ ಬಳಸಿ ಸಂಚಾರಯೋಗ್ಯಗೊಳಿಸಿದರು.

ಈ ಬಗ್ಗೆ ಸ್ಪಂದಿಸಬೇಕಾದ ಸಂಬಂಧಿತ ಇಲಾಖೆಗಳು ಮೌನವಾಗಿರುವುದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿತ್ತು. ಮಳೆಗಾಲದಲ್ಲಿ ಈ ರಸ್ತೆ ಕೆಸರು ಗದ್ದೆಯಾಗುವುದು ಮಾಮೂಲಿಯಾಗಿದ್ದರೂ ಸಂಬಂಧಿತ ಇಲಾಖೆ ಮಳೆಗಾಲಕ್ಕೆ ಮೊದಲೇ ನೀರು ಹರಿದು ಹೋಗುವ ವ್ಯವಸ್ಥೆ ಕಲ್ಪಿಸಿದ್ದರೆ ಇಲ್ಲಿ ಕೆಸರು ಗದ್ದೆಯಾಗುವುದನ್ನು ತಪ್ಪಿಸಬಹುದೆಂಬುದು ಸ್ಥಳೀಯರ ಹೇಳಿಕೆ. ಅಂತೂ ಆಟೋ ಚಾಲಕರ ಕಾರ್ಯ ಸಾರ್ವಜನಿಕರ ಮುಕ್ತ ಪ್ರಶಂಸೆಗೆ ಕಾರಣವಾಗಿದೆ.