ಚಿನ್ನ ದೋಚಿದ ರಿಕ್ಷಾವಾಲಾ ಸೆರೆ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮೂಡುಬಿದಿರೆ : ಪುತ್ತಿಗೆ ಗ್ರಾಮದ ಕಾಯರಪುಂಡು ಎಂಬಲ್ಲಿ ಉಂಡ ಮನೆಗೆ ಕನ್ನ ಹಾಕಿದ ರಿಕ್ಷಾ ಚಾಲಕನನ್ನು ಪೊಲೀಸರು ಬಂಧಿಸಿ ಸುಮಾರು 2 ಲಕ್ಷ ರೂ ಮೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತ ಆರೋಪಿ ಅಶ್ವತ್ಥಪುರ ಗುಂಡೆಬೆಟ್ಟು ನಿವಾಸಿ ಚೆಂಗು ಪೂಜಾರಿ ಅವರ ಮಗ ಅಶೋಕ್ (42) ಎಂದು ತಿಳಿದುಬಂದಿದೆ. ಈತ ಸಂಪಿಗೆಯಲ್ಲಿ ರಿಕ್ಷಾ ಓಡಿಸುತ್ತಿದ್ದು,  ಇದರ ಮಧ್ಯೆ ಕಾಯರಪುಂಡು ರತ್ನ ಎಂಬವರ ಮನೆ ಮತ್ತು ತೋಟದ ಮೇಲ್ವಿಚಾರಣೆಯನ್ನು ನೋಡಿಕೊಳ್ಳುತ್ತಿದ್ದ ಎನ್ನಲಾಗಿದೆ. ನವೆಂಬರ್ 25ರಂದು ರತ್ನ ಅವರ ಮನೆಯಲ್ಲಿ ಯಾರು ಇಲ್ಲದ ವೇಳೆ ಮನೆಯ ಹಂಚು ತೆಗೆದು ಸುಮಾರು 2 ಲಕ್ಷ ರೂ ಮೌಲ್ಯದ ಚಿನ್ನಾಭರಣ ಕಳವು ಮಾಡಿ ಮೂಡುಬಿದಿರೆಯ ಸಹಕಾರಿ ಬ್ಯಾಂಕ್ ಒಂದರಲ್ಲಿ ಅಡವಿಟ್ಟಿದ್ದ. ಇದಾದ ನಂತರ ಆತ ವಿವಾಹವಾಗಿದ್ದ ಎನ್ನಲಾಗಿದೆ. ಕಳ್ಳತನದ ಬಗ್ಗೆ ರತ್ನ ನೀಡಿದ ದೂರಿನನ್ವಯ ಅಪರಾಧ ವಿಭಾಗದ ಎಸೈ ಶಂಕರ್ ನಾಯರಿ ಪ್ರಕರಣ ದಾಖಲಿಸಿ ತನಿಖೆ ನಡೆಸಿ ಗುರುವಾರ ಆರೋಪಿಯನ್ನು ಬಂಧಿಸಿ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ಇಲ್ಲಿನ ಕೋರ್ಟಿಗೆ ಹಾಜರುಪಡಿಸಿದಾಗ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.