`ರಸ್ತೆ ಗುಂಡಿ ಅಪಘಾತಕ್ಕೆ ಪ್ರಾಧಿಕಾರಗಳೇ ಹೊಣೆ’

ಬೆಂಗಳೂರು : ರಸ್ತೆ ಗುಂಡಿಗಳು ಹಾಗೂ ಅವೈಜ್ಞಾನಿಕ ವೇಗನಿಯಂತ್ರಕ ಯಾ ರಸ್ತೆ ಉಬ್ಬುಗಳಿಂದಾಗಿ ಸಂಭವಿಸುವ ಅಪಘಾತಗಳಿಗೆ ರಸ್ತೆ ನಿರ್ಮಿಸಿದ ಪ್ರಾಧಿಕಾರಗಳನ್ನೇ ಹೊಣೆಯಾಗಿಸಬೇಕೆಂದು ರಸ್ತೆ ಸುರಕ್ಷತೆ ಮತ್ತು ಸಾರಿಗೆ ವಿಭಾಗದ ಆಯುಕ್ತೆ ಡಿ ರೂಪಾ ಹೇಳಿದ್ದಾರೆ. ಇತ್ತೀಚೆಗೆ ಲೋಕಸಭೆ ಅನುಮೋದಿಸಿರುವ ಹಾಗೂ ರಾಜ್ಯ ಸಭೆಯ ಅನುಮೋದನೆಗೆ ಕಾಯುತ್ತಿರುವ  ಮೋಟಾರ್ ವಾಹನಗಳ (ತಿದ್ದುಪಡಿ) ಮಸೂದೆಗೆ ಕೆಲ ತಿದ್ದುಪಡಿಗಳನ್ನು ಸೂಚಿಸಿ

ರೂಪಾ ಅವರು ರಾಜ್ಯಸಭೆ ಆಯ್ಕೆ ಸಮಿತಿಗೆ ಕಳುಹಿಸಿದ್ದಾರೆ. ಈ ಸಮಿತಿ ತನ್ನ ವರದಿಯನ್ನು ಚಳಿಗಾಲದ ಅಧಿವೇಶನದ ಪ್ರಥಮ ದಿನ ಸಲ್ಲಿಸುವ ಸಾಧ್ಯತೆಯಿದೆ.

“ಹೆಚ್ಚಿನ ಅಪಘಾತಗಳು ಸವಾರರ ನಿರ್ಲಕ್ಷ್ಯದಿಂದ ನಡೆಯುತ್ತಿಲ್ಲ, ಬದಲಾಗಿ ರಸ್ತೆಗಳ ದುರವಸ್ಥೆಯಿಂದ ಸಂಭವಿಸುತ್ತಿವೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಲೋಕೋಪಯೋಗಿ ಇಲಾಖೆ ಇಲ್ಲವೇ ಸ್ಥಳೀಯಾಡಳಿತ, ಯಾರೇ ಆಗಿದ್ದರೂ ಈ ರಸ್ತೆ ನಿರ್ಮಾಣ ಜವಾಬ್ದಾರಿ ವಹಿಸಿದವರನ್ನೇ ಅಪಘಾತಕ್ಕೂ ಹೊಣೆಯಾಗಿಸಬೇಕು” ಎಂಬುದು ರೂಪಾ ಅವರ ಸಲಹೆ.

ರಾಜಧಾನಿಯಲ್ಲಿ ಅಕ್ಟೋಬರ್ 4ರಂದು ನಡೆದ ಮೂರು ಬೈಕ್ ಅಪಘಾತಗಳಲ್ಲಿ ಇಬ್ಬರು ಮೃತಪಟ್ಟಿದ್ದರು. ಮೂರೂ ಪ್ರಕರಣಗಳಲ್ಲಿ ಸವಾರರು ರಸ್ತೆ ಗುಂಡಿಯನ್ನು ತಪ್ಪಿಸಲೆತ್ನಿಸಿ ಅಪಘಾತಕ್ಕೊಳಗಾಗಿದ್ದರು.