ಪ್ರಭಾ ಕೊಲೆ ತನಿಖೆಗೆ ಅಮ್ಟೂರಿಗೆ ಬರಲಿರುವ ಆಸ್ಟ್ರೇಲಿಯಾ ಪೊಲೀಸ್

ಪ್ರಭಾ ಅರುಣ್ ಕುಮಾರ್

ಹತ್ಯೆ ಹಿಂದೆ ಭಾರತೀಯನ ಕೈವಾಡ ? ಸುಪಾರಿ ಕೊಲೆಯೆಂಬ ಶಂಕೆ

ಬೆಂಗಳೂರು : ಆಸ್ಟ್ರೇಲಿಯಾದ ಸಿಡ್ನಿಯಲ್ಲಿರುವ ಮೈಂಡ್ ಟ್ರೀ ಸಾಫ್ಟವೇರ್ ಕಂಪೆನಿಯಲ್ಲಿ ಸೀನಿಯರ್ ಟೆಕ್ನಿಕಲ್ ಅನಾಲಿಸ್ಟ್ ಆಗಿದ್ದ ದಕ್ಷಿಣ ಕನ್ನಡದ ಅಮ್ಟೂರು ಮೂಲದ ಪ್ರಭಾ ಅರುಣ್ ಕುಮಾರ್ (41) ಅವರ ಹತ್ಯೆ ಪ್ರಕರಣದ ತನಿಖೆಗಾಗಿ ನ್ಯೂ ಸೌತ್ ವೇಲ್ಸ್ ಪೊಲೀಸರು ಬೆಂಗಳೂರಿಗೆ ಆಗಮಿಸಿದ್ದು ಸಿಐಡಿಯ ಸೈಬರ್ ಕ್ರೈಂ ಘಟಕದ ಸಹಯೋಗದೊಂದಿಗೆ ಹಂತಕರ ಪತ್ತೆ ಕಾರ್ಯಕ್ಕೆ ಕೈಹಾಕಿದ್ದಾರೆ.

ತಂಡವು  ಸದ್ಯಲ್ಲಿಯೇ ಪ್ರಭಾ ಅವರ ಹುಟ್ಟೂರು ದಕ್ಷಿಣ ಕನ್ನಡದ ಅಮ್ಟೂರಿಗೆ ಆಗಮಿಸಲಿದ್ದು ಪ್ರಭಾ ಹೆತ್ತವರು, ಪತಿ ಹಾಗೂ ಕುಟುಂಬವರ್ಗವನ್ನು ವಿಚಾರಣೆ ನಡೆಸಲಿದ್ದಾರೆ.

ಆಸ್ಟ್ರೇಲಿಯಾದ ಪೊಲೀಸರು ಇದೀಗ ಪ್ರಭಾ ಕೊಲೆಯ ಹಿಂದೆ ಭಾರತೀಯನೊಬ್ಬನ ಕೈವಾಡ ಶಂಕಿಸುತ್ತಿದ್ದು ಇದೊಂದು ಸುಪಾರಿ ಕೊಲೆಯೂ ಆಗಿರಹುದು ಎಂದು ಊಹಿಸಲಾಗಿದೆ.

ಆರಂಭದಲ್ಲಿ ಇದೊಂದು ಹಣಕ್ಕಾಗಿ ನಡೆದ ಕೊಲೆಯಾಗಿರಬಹುದೆಂದು ಭಾವಿಸಲಾಗಿದ್ದರೂ ಪ್ರಭಾ ಅವರ ಪರ್ಸ್ ಹಾಗೂ ಚಿನ್ನಾಭರಣಗಳನ್ನು ಹಂತಕ ಮುಟ್ಟಿರದೇ ಇರುವುದರಿಂದ ಈ ಸಾಧ್ಯತೆಯನ್ನು ಅಲ್ಲಗಳೆಯಲಾಗಿದೆ.

ಆಸ್ಟ್ರೇಲಿಯಾದಲ್ಲಿ ಮೂರು ವರ್ಷದ ಅವಧಿಗೆ  ಡೆಪ್ಯುಟೇಶನ್ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪ್ರಭಾ ಮಾರ್ಚ್ 7, 2015ರಂದು ತಮ್ಮ ಕಚೇರಿಯಿಂದ ಮನೆಗೆ ಹಿಂದಿರುಗುವ ವೇಳೆ ಪರ್ರಮಟ್ಟ ರೈಲು ನಿಲ್ದಾಣದಿಂದ ಇಳಿದು ನಡೆಯುತ್ತಿದ್ದಾಗ ಆಗಂತುಕನೊಬ್ಬ ಆಕೆಯ ಕತ್ತು ಸೀಳಿ ಆಕೆಯ ಮನೆಯಿಂದ ಕೇವಲ 300 ಮೀಟರ್ ದೂರದಲ್ಲಿ ಆಕೆಯ ಹತ್ಯೆ ನಡೆಸಿದ್ದ. ಮೂಲಗಳ ಪ್ರಕಾರ ಪ್ರಭಾ ಅವರಿಗೆ  ಹಂತಕನ ಪರಿಚಯವಿತ್ತು.