ಕಸ್ಟಮರ್ ಮೇಲೆ ಆಕರ್ಷಣೆ

ಪ್ರ : ನಾನು ಚಪ್ಪಲ್ ಅಂಗಡಿಯ ಮಾಲಿಕ. ಮದುವೆಯಾಗಿ ಎರಡು ಮಕ್ಕಳಿದ್ದಾರೆ. ನನ್ನ ಹೆಂಡತಿ ಹೆಚ್ಚು ಓದಿಲ್ಲ. ಅವಳಿಗೆ ಒಡವೆ ವಸ್ತ್ರ ಬಿಟ್ಟರೆ ಬೇರೆ ಯಾವುದರ ಬಗ್ಗೆಯೂ ಆಸಕ್ತಿಯಿಲ್ಲ. ನನ್ನ ಬಿಸಿನೆಸ್ ಬಗ್ಗೆ ಸಹ ಅವಳು ವಿಚಾರಿಸಿಕೊಳ್ಳುವುದಿಲ್ಲ. ಅವಳು ನೋಡಲು ಸುಂದರಳಾಗಿದ್ದರೂ ನನಗೀಗ ಬೇರೆ ಮಹಿಳೆಯ ಬಗ್ಗೆ ಸೆಳೆತ ಶುರುವಾಗಿದೆ. ಆಕೆ ನಮ್ಮ ಶಾಪಿನ ಖಾಯಂ ಕಸ್ಟಮರ್. ನೋಡಲು ಆಕರ್ಷಕವಾಗಿರುವ ಆಕೆಗೆ ಮದುವೆಯಾಗಿ ಒಬ್ಬ ಚಿಕ್ಕ ಮಗನಿದ್ದಾನೆ. ನನ್ನ ಶಾಪಿನ ಸಮೀಪ ಅನೇಕ ಚಪ್ಪಲ್ ಅಂಗಡಿಗಳಿದ್ದರೂ ಅವಳು ನಮ್ಮ ಅಂಗಡಿಯಲ್ಲೇ ಅವಳಿಗೆ ಬೇಕಾದ್ದೆಲ್ಲ ಖರೀದಿಸುವುದು. ತಿಂಗಳಿಗೆ ಎರಡು ಬಾರಿಯಾದರೂ ಹೊಸದೇನು ಬಂದಿದೆ ಅಂತ ನೋಡುವ ನೆವದಲ್ಲಾದರೂ ಬಂದು ಹೋಗುತ್ತಾಳೆ. ಕೆಲವೊಮ್ಮೆ ಅವಳು ಬೇಕೆಂದೇ ನಮ್ಮ ಅಂಗಡಿಗೆ ಬರುತ್ತಿದ್ದಾಳೇನೋ ಅನಿಸುತ್ತಿದೆ. ಮಗುವನ್ನು ಕರೆದುಕೊಂಡು ಬರುತ್ತಾಳೆ. ಆದರೆ ಅವಳ ಗಂಡನನ್ನು ಒಮ್ಮೆಯೂ ನಾನು ನೋಡಿಲ್ಲ. ನನ್ನ ಹತ್ತಿರ ಆತ್ಮೀಯವಾಗಿ ಮಾತಾಡ್ತಾ ನಿಲ್ಲುತ್ತಾಳೆ. ಹೊಸ ಬ್ರಾಂಡಿನ ಚೆನ್ನಾಗಿರುವ ಯಾವುದಾದರೂ ಚಪ್ಪಲ್ಸ್ ಬಂದರೆ ನಾನು ಅವಳಿಗಾಗಿ ಕಾದಿರಿಸಿ ಫೋನ್ ಮಾಡಿ ಕರೆಯುತ್ತೇನೆ. ಆಕೆ ನಮ್ಮ ಶಾಪಿಗೆ ಬಂದ ದಿನ ನಾನೂ ಲವಲವಿಕೆಯಿಂದಿರುತ್ತೇನೆ. ಅವಳ ನಡತೆ ನೋಡಿದರೆ ಅವಳಿಗೆ ನನ್ನ ಮೇಲೆ ಮನಸ್ಸಾಗಿದೆ ಅಂತ ಅನಿಸುತ್ತಿದೆ. ನನಗಂತೂ ಅವಳನ್ನು ಪಡೆಯುವ ಆಸೆ ದಿನದಿನಕ್ಕೆ ಹೆಚ್ಚುತ್ತಿದೆ. ಹೇಗೆ ಮುಂದುವರಿಯಲಿ?

: ಇಂತಹ ಅನೈತಿಕತೆಯ ದಂಧೆಗೆಲ್ಲ ನಾನು ಸಲಹೆ ಕೊಡುವುದಿಲ್ಲ. ನೀವು ಈ ರೀತಿಯ ದುರುದ್ದೇಶ ಹೊಂದಿದ್ದೀರಿ ಅಂತ ಗೊತ್ತಾದರೆ ಆ ಮಹಿಳೆ ಖಂಡಿತಾ ನಿಮ್ಮ ಶಾಪನ್ನು ಕಣ್ಣೆತ್ತಿ ಸಹ ನೋಡಲಿಕ್ಕಿಲ್ಲ. ಕೆಲವರಿಗೆ ಕೆಲವು ಶಾಪಿನ ಕೆಲವು ಬ್ರಾಂಡ್‍ಗಳು ಇಷ್ಟವಾಗುತ್ತವೆ. ಅವರವರ ಬಜೆಟ್ಟಿಗೆ ಸರಿಯಾಗಿ ಅವರ ಮನಸ್ಸಿಗೆ ಬರುವ ವಸ್ತುಗಳು ಹೆಚ್ಚಾಗಿ ಎಲ್ಲಿ ಸಿಗುತ್ತವೋ ಅಲ್ಲಿಗೇ ಜನರು ಹೆಚ್ಚಾಗಿ ಹೋಗುತ್ತಾರೆ. ಕೆಲವು ಸಲ ಒಂದೇ ಅಂಗಡಿಗೆ ಹೋದರೆ ಸ್ವಲ್ಪ ಪರಿಚಯವಾಗುವುದು ಕಾಮನ್. ತಮ್ಮಿಂದ ಹೆಚ್ಚು ಹಣ ಪೀಕಿಸಲಿಕ್ಕಿಲ್ಲ ಅಂತ ಸ್ವಲ್ಪ ವಿಶ್ವಾಸವೂ ಮೂಡಬಹುದು. ಅದೇ ವಿಶ್ವಾಸದಿಂದ ಆತ್ಮೀಯವಾಗಿ ಮಾತೂ ಆಡಬಹುದು. ಈಗೀಗ ಹೆಚ್ಚಿನ ಬ್ರಾಂಡೆಡ್ ಶಾಪ್‍ಗಳು ಮೊಬೈಲ್ ನಂಬರ್ ಕಲೆಕ್ಟ್ ಮಾಡಿ ಡಿಸ್ಕೌಂಟ್ ಆಫರ್ಸ್ ಇದ್ದರೆ ಕಸ್ಟಮರ್ಸ್‍ಗೆ ಎಸ್ಸೆಮ್ಮೆಸ್ ಕಳಿಸುವುದೆಲ್ಲ ಕಾಮನ್. ನೀವೂ ಅದೇ ರೀತಿ ಕರೆ ಮಾಡಿರಬಹುದು ಅಂತ ಆಕೆ ಭಾವಿಸರಲಿಕ್ಕೂ ಸಾಕು. ಹಾಗಂತ ಒಂದು ಮಗುವಿನ ತಾಯಿಯೂ ಆಗಿರುವ ಆಕೆಗೆ ನಿಮ್ಮ ಮೇಲೆ ಮನಸ್ಸಾಗಿದೆ ಅಂತ ಭಾವಿಸುವುದು ತುಂಬಾ ಚೀಪ್. ಮೊದಲು ನಿಮ್ಮ ಶಾಪಿಗೆ ಬರುವ ಗಿರಾಕಿಗಳನ್ನು ಅದರಲ್ಲೂ ಮಹಿಳಾ ಕಸ್ಟಮರ್ಸ್‍ಗಳನ್ನು ಗೌರವದಿಂದ ಕಾಣಲು ಕಲಿಯಿರಿ. ಅವರ ಮೇಲೇ ನೀವು ಕಾಕದೃಷ್ಟಿ ಬೀರಿದರೆ ನಿಮ್ಮ ಬಿಸಿನೆಸ್ ಹಾಳಾಗುವುದರ ಜೊತೆ ನಿಮ್ಮ ಹೆಸರೂ ಕೆಡುವುದು ನಿಸ್ಸಂಶಯ. ಎರಡು ಮಕ್ಕಳ ಅಪ್ಪನಾಗಿರುವ ನೀವು ಜವಾಬ್ದಾರಿಯಿಂದ ಬಿಸಿನೆಸ್ ಮಾಡಿ ನಿಮ್ಮ ಸಂಸಾರ ನೆಟ್ಟಗಿರುವಂತೆ ಮೊದಲು ನೋಡಿಕೊಳ್ಳಿ.