ಕೆಲಸದವಳ ಬಗ್ಗೆ ಆಕರ್ಷಣೆ

ಆಗತಾನೇ ಪ್ರಾಯ ಚಿಗುರುತ್ತಿರುವ ಪ್ರಪಂಚದ ಜ್ಞಾನವೂ ಇರದ ಆ

ಹುಡುಗಿಯ ಮನದಲ್ಲಿ ಆಸೆ ಬಿತ್ತಿದಿರಿ.

 

ಪ್ರ : ಮದುವೆಯಾಗಿ ಏಳು ವರ್ಷವಾಯಿತು. ಐದು ವರ್ಷದ ಮಗನಿದ್ದಾನೆ. ನಾವಿಬ್ಬರೂ ಕೆಲಸಕ್ಕೆ ಹೋಗುತ್ತೇವೆ. ಮಗನನ್ನು ನೋಡಿಕೊಳ್ಳಲು ಮತ್ತು ಮನೆಕೆಲಸಕ್ಕೆ ಅಂತ ಹಳ್ಳಿಯಿಂದ ಬಂದ ಹುಡುಗಿಯೊಬ್ಬಳು ನಮ್ಮ ಜೊತೆ ಇದ್ದಾಳೆ. ಅವಳಿಗೆ ಹದಿನೆಂಟು ವರ್ಷ ಇರಬಹುದು. ಲಕ್ಷಣವಾದ ಹುಡುಗಿ. ಮೊದಲ ಬಾರಿ ಅವಳು ನಮ್ಮ ಮನೆಗೆ ಬಂದಾಗಲೇ ನನಗೆ ಅವಳ ಮೇಲೆ ಆಕರ್ಷಣೆ ಉಂಟಾಯಿತು. ನನ್ನ ಹೆಂಡತಿ ಸ್ವಲ್ಪ ಆಲಸಿ. ಅಡುಗೆ ಕೆಲಸ, ಮನೆಕೆಲಸ ಎಲ್ಲವನ್ನೂ ಆ ಹುಡುಗಿಯೇ ನಿಭಾಯಿಸುವುದು. ಅವಳು ನಗುನಗುತ್ತಾ ಒಡಾಡುತ್ತಾ ಕೆಲಸ ಮಾಡುವ ರೀತಿಗೆ ಮತ್ತಿಷ್ಟು ನಾನು ಮನಸೋತೆ. ಕಳೆದ ತಿಂಗಳು ನಾನು ಜ್ವರ ಬಂದು ಮಲಗಿದ್ದೆ. ಹೆಂಡತಿ ಆಫೀಸಿನಲ್ಲಿ ಸ್ಟಾಫ್ ಕಡಿಮೆ ಇದ್ದಿದ್ದರಿಂದ ರಜೆ ಹಾಕಿರಲಿಲ್ಲ. ಆ ಹುಡುಗಿಯೇ ನನ್ನ ಆರೈಕೆ ಮಾಡಿದ್ದು. ಆ ಸಮಯದಲ್ಲಿ ನನಗೆ ನನ್ನ ಮೇಲಿನ ಹತೋಟಿ ತಪ್ಪಿ ಅವಳನ್ನು ಹಾಸಿಗೆಗೆ ಕರೆದೆ. ತುಂಬಾ ದಿನದಿಂದ ಮನದಲ್ಲೇ ಇದ್ದ ಬಯಕೆ ಅಂದು ನೆರವೇರಿತು. ಅವಳು ಗರ್ಭಿಣಿಯಾಗದ ಹಾಗೆ ಎಚ್ಚರಿಕೆ ವಹಿಸಿದ್ದೆ. ನನಗೆ ಅವಳ ಜೊತೆ ಸಂಬಂಧ ಮುಂದುವರಿಸುವ ಇರಾದೆಯಿಲ್ಲ. ನನ್ನ ಹೆಂಡತಿ, ಮಗುವಿನಿಂದ ದೂರಹೋಗುವ ಮನಸ್ಸೂ ಇಲ್ಲ. ಈ ವಿಷಯ ಯಾರಿಗೂ ತಿಳಿಸಬಾರದೆಂದು ಅವಳಿಗೆ ದೊಡ್ಡ ಗಿಫ್ಟೂ ಕೊಟ್ಟಿದ್ದೆ. ಆದರೂ ಆ ಹುಡುಗಿ ಆಗಾಗ ನನ್ನನ್ನು ಆಸೆಯ ದೃಷ್ಟಿಯಿಂದ ನೋಡುತ್ತಿರುತ್ತಾಳೆ. ಅವಳು ನನ್ನನ್ನು ಪ್ರೀತಿಸುತ್ತಿದ್ದಾಳೆ ಅಂತ ಅವಳ ನೋಟದಿಂದ ತಿಳಿಯುತ್ತಿದೆ. ನನಗೇನು ಮಾಡಬೇಕೆಂದೇ ತೋಚುತ್ತಿಲ್ಲ. ನಿಮ್ಮ ಸಲಹೆ ಏನು?

: ನಿಮ್ಮಂತವರಿಗೆ ಏನು ಸಲಹೆ ಕೊಡಲಿ? ಅಮಾಯಕ ಹೆಣ್ಣುಮಗಳನ್ನು ನಿಮ್ಮ ಮನೆಯವರ ಸೇವೆಗೆ ಅಂತ ಕರೆತಂದು ಅವಳ ಶೀಲವನ್ನೇ ಕೆಡಿಸಿ ಈಗ ಸ್ಮಾರ್ಟ್ ಫೋಸ್ ಕೊಡುತ್ತಿದ್ದೀರಿ. ಆಗತಾನೇ ಪ್ರಾಯ ಚಿಗುರುತ್ತಿರುವ ಪ್ರಪಂಚದ ಜ್ಞಾನವೂ ಇರದ ಆ ಹುಡುಗಿಯ ಮನದಲ್ಲಿ ಆಸೆ ಬಿತ್ತಿದಿರಿ. ಬಡತನದ ಬೇಗೆಯಿಂದ ಬಂದ ಹುಡುಗಿ ನೀವು ಅವಳನ್ನು ಪ್ರೀತಿಸುತ್ತಿದ್ದೀರಿ ಅಂತಲೇ ಭಾವಿಸಿ ನಿಮ್ಮ ತೃಷೆಗೆ ಬಲಿಯಾದಳು. ಈ ವಿಷಯ ನಿಮ್ಮ ಹೆಂಡತಿಗೆ ಗೊತ್ತಾದರೆ ಅವಳು ಸುಮ್ಮನಿರುತ್ತಾಳಾ? ಸಂಸಾರಕ್ಕಾಗಿ ದುಡಿಯುವ ಅವಳಿಗೂ ನೀವು ಅನ್ಯಾಯ ಮಾಡಿದಂತಾಗಲಿಲ್ಲವೇ? ಆ ಕೆಲಸದ ಹುಡುಗಿ ನಿಮ್ಮಲ್ಲೇ ಇನ್ನೂ ಮುಂದುವರಿದರೆ ಇಂದಲ್ಲ ನಾಳೆ ನಿಮ್ಮ ಬಣ್ಣ ಬಯಲಾಗದೇ ಇರದು. ಆಗ ನಿಮ್ಮ ಹೆಂಡತಿ ಸ್ವಾಭಿಮಾನಿಯಾಗಿದ್ದರೆ ಹೇಗೂ ದುಡಿಯುವ ಮಹಿಳೆಯೂ ಅವಳಾದ್ದರಿಂದ ಮಗನನ್ನು ಕರೆದುಕೊಂಡು ಮನೆಯಿಂದಲೇ ಹೊರಹೋಗಬಹುದು. ನಿಮ್ಮ ತಪ್ಪು ಇನ್ನೂ ಮುಂದುವರಿಯಬಾರದೆಂದಿದ್ದರೆ ಆ ಹುಡುಗಿಗೆ ಒಂದು ಬೇರೆ ನೆಲೆಕಾಣಿಸಿ. ಆದರೂ ಆ ಹುಡುಗಿಯ ಮೂಕವೇದನೆ, ಹೆಂಡತಿಗೆ ಮಾಡಿದ ಅನ್ಯಾಯ ನಿಮ್ಮನ್ನು ಕಾಡದೇ ಇರದು.