`ರಾಷ್ಟ್ರೀಯತೆ ಹೇರುವ ಯತ್ನ ಅಶಾಂತಿ ಸೃಷ್ಟಿಸುತ್ತದೆ’

`ರಾಷ್ಟ್ರೀಯ ಧ್ವಜ ಅಥವಾ ರಾಷ್ಟ್ರಗೀತೆಗೆ ಗೌರವ ನೀಡುವುದು ಭಾವನಾತ್ಮಕ ವಿಷಯವಾಗಿದ್ದು, ಅದು ಅಂತರಾತ್ಮದಿಂದ ಬರಬೇಕು’

ಚಿತ್ರಮಂದಿರಗಳಲ್ಲಿ ಚಲನಚಿತ್ರ ಆರಂಭಕ್ಕೆ ಮುನ್ನ ರಾಷ್ಟ್ರಗೀತೆ ಹಾಡಬೇಕು ಮತ್ತು ಆಗ ಪ್ರೇಕ್ಷಕರು ಎದ್ದು ನಿಂತು ಗೌರವ ನೀಡಬೇಕೆಂದು ಸುಪ್ರೀಂ ಕೋರ್ಟ್ ಇತ್ತೀಚೆಗೆ ನಿರ್ದೇಶನ ನೀಡಿದೆ. “ಯಾವುದೇ ಸಂಸ್ಥೆ ಅಥವಾ ಸರ್ಕಾರ ಜನರ ಮೇಲೆ ರಾಷ್ಟ್ರೀಯತೆ ಹೇರಬೇಕಾಗಿಲ್ಲ. ಅದು ಅವರ ಮನಸ್ಸಿನೊಳಗಿಂದ ಬರಬೇಕು” ಎಂದು ಸಾಮಾಜಿಕ ಅಧ್ಯಯನ ಕೇಂದ್ರದ ನಿರ್ದೇಶಕಿ ರಂಜನಾ ಕುಮಾರಿ ಹೇಳುತ್ತಾರೆ.. ಅವರೊಂದಿಗೆ ಮಾತುಕತೆ.

  • ಚಲನಚಿತ್ರ ಮಂದಿರಗಳಲ್ಲಿ ರಾಷ್ಟ್ರಗೀತೆ ಕಡ್ಡಾಯಗೊಳಿಸಿದ ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ನಿಮ್ಮ ಅಭಿಮತವೇನು ? ಭಾರತೀಯ ನಾಗರಿಕರ ಮೇಲೆ ರಾಷ್ಟ್ರೀಯತೆ ಹೇರುವ ಕಲ್ಪನೆ ಇದಾಗಿದೆಯೇ ?

ಸುಪ್ರೀಂ ಕೋರ್ಟ್ ತೀರ್ಪಿಗೆ ನಾವು ಗೌರವ ನೀಡುತ್ತೇವೆ. ಆದಾಗ್ಯೂ ಹಲವು ವಿಚಾರವಂತರ ಮತ್ತು ದೇಶಭಕ್ತ ಭಾರತೀಯರು ತೀರ್ಪಿನ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಈ ತೀರ್ಪಿನಲ್ಲಿ ಪುನರ್‍ಪರಿಶೀಲನೆ ಆಗಬೇಕು. ಸ್ವಾಭಾವಿಕವಾಗಿ ನಾವು ರಾಷ್ಟ್ರಗೀತೆ ಗೌರವಿಸುತ್ತೇವೆ. ಕುಟುಂಬ ಮತ್ತು ಶಾಲೆಗಳಲ್ಲಿ ಅದನ್ನು ಕಲಿಯುತ್ತೇವೆ. ಈ ತೀರ್ಪನ್ನು ಹೇಗೆ ಅನುಷ್ಠಾನಗೊಳಿಸುದೆಂಬುದು ನೈಜ ಸಮಸ್ಯೆಯಾಗಿದೆ. ಚಿತ್ರಮಂದಿರಗಳಿಗೆ ಮನೋರಂಜನೆಗಾಗಿ ನಾವು ಹೋಗುತ್ತೇವೆ. ಚಿತ್ರಮಂದಿರದೊಳಗೆ ಮತ್ತು ಹೊರಗೆ ಜನರು ಅತ್ತಿಂದಿತ್ತ ನಡೆದಾಡುವಾಗ ಅಥವಾ ತಿಂಡಿ ತಿನ್ನುವಾಗ ಮತ್ತು ಆರಾಮವಾಗಿರುವಾಗ ರಾಷ್ಟ್ರಗೀತೆಯ ಸಂಪೂರ್ಣ ಅನುಷ್ಠಾನಗೊಳಿಸಲು ಸರ್ಕಾರದಿಂದ ಸಾಧ್ಯವೇ ? ಸಿನೆಮಾ ಮಂದಿರದಲ್ಲಿ ರಾಷ್ಟ್ರಗೀತೆ ಕೇಳಿ ಬರುವಾಗ ತಿಂಡಿ ತಿನ್ನುತ್ತಿರುವ ಅಥವಾ ಮಾತನಾಡುತ್ತಿರುವ ಪ್ರತಿಯೊಬ್ಬರ ವಿರುದ್ಧ ಸರ್ಕಾರ ಕೇಸು ದಾಖಲಿಸುತ್ತದೆಯೇ ? ಇದೆಲ್ಲದರ ಮಧ್ಯೆ ರಾಷ್ಟ್ರಗೀತೆ ಕೇಳಿ ಬರುವಾಗ ಎದ್ದು ನಿಂತರೆ ರಾಷ್ಟ್ರಕ್ಕೆ ಗೌರವ ನೀಡಿದಂತಾಗುವುದಿಲ್ಲ. ಜಗತ್ತಿನ ಯಾವೊಂದು ದೇಶದ ಚಿತ್ರ ಮಂದಿರಗಳಲ್ಲಿ ರಾಷ್ಟ್ರಗೀತೆ ನುಡಿಸಬೇಕೆಂಬ ಯಾವುದೇ ಕಾನೂನಿಲ್ಲ. ರಾಷ್ಟ್ರಗೀತೆ ಅಥವಾ ರಾಷ್ಟ್ರಧ್ವಜಕ್ಕೆ ಗೌರವ ನೀಡುವುದು ಭಾವನಾತ್ಮಕ ವಿಷಯವಾಗಿದ್ದು, ಇದು ನಮ್ಮ ಮನಸ್ಸಿನೊಳಗಿಂದ ಬರಬೇಕು.  • ಸಾಮಾನ್ಯ ಜನರು ಮತ್ತು ರಾಷ್ಟ್ರದ ಮಟ್ಟಿಗೆ ಈ ತೀರ್ಪು ಯಾವ ರೀತಿಯ ಪರಿಣಾಮ ಬೀರಲಿದೆ ?

ದೇಶದ ಇತಿಹಾಸ, ಸಾಮಾನ್ಯ ಸಂಸ್ಕøತಿ-ಪರಂಪರೆ ಬಗ್ಗೆ ಪ್ರತಿಯೊಬ್ಬ ಭಾರತೀಯರಿಗೆ ಹೆಮ್ಮ ಇದೆ. ಯಾವುದೇ ಸಂಸ್ಥೆ ಅಥವಾ ಸರ್ಕಾರ ಯಾರ ಮೇಲೂ ರಾಷ್ಟ್ರೀಯತೆ ಹೇರುವಂತಿಲ್ಲ. ಇಂತಹ ಯತ್ನಗಳಿಂದ ಉದ್ವೇಗ ಮತ್ತು ಬಂಡಾಯ ಭಾವನೆ ಹೆಚ್ಚಾಗಬಹುದು. ಇದರ ಬದಲಾಗಿ, ಉದಾತ್ತ ನಾಯಕರು, ಉತ್ತಮ ಆಡಳಿತ ಮತ್ತು ಸೌಹಾರ್ದತೆಯ ಮೂಲಕ ದೇಶದ ಜನರಲ್ಲಿ ರಾಷ್ಟ್ರೀಯತೆಯ ಭಾವನೆ ಮೂಡಿಸಲು ಒಂದು ಸಮಾಧಾನಕರ ಪರಿಸರ ಸೃಷ್ಟಿಸಬೇಕು.  • ನೋಟು ನಿಷೇಧಕ್ಕಾಗಿ ವಿಪಕ್ಷಗಳು ಸರ್ಕಾರದ ವಿರುದ್ಧ ಕಿಡಿ ಕಾರುತ್ತಿರುವ ಹೊತ್ತಿಗೇ ಈ ತೀರ್ಪನ್ನು ಮೋದಿ ಸರ್ಕಾರ ತಿರುವು ಮಂತ್ರವನ್ನಾಗಿಸಿದೆಯೇ ?

ಈ ತೀರ್ಪಿನಿಂದ ಸರ್ಕಾರಕ್ಕೆ ಲಾಭವಾಗುತ್ತದೆ ಎಂಬುದು ಅಸಂಬದ್ಧ ಮಾತು. ಈ ದಿನದ ಸರ್ಕಾರಕ್ಕೆ ತನ್ನ ನಾಯಕತ್ವದ ಕೌಶಲ್ಯ ಮತ್ತು ಆಡಳಿತ ಸಾಮಥ್ರ್ಯ ಗೊತ್ತಿರಬೇಕು. ಶಾಂತಿ ಮತ್ತು ಸೌಹಾರ್ದತೆ, ಜಿಡಿಪಿ ಪ್ರಗತಿ, ಉತ್ತಮ ಉದ್ಯೋಗಾವಕಾಶ, ಹೆಚ್ಚು ಉದ್ಯೋಗ ಸೃಷ್ಟಿ, ಜನರ ಜೀವನ ಗುಣಮಟ್ಟ ಹೆಚ್ಚಿಸುವುದು, ಉತ್ತಮ ಆರೋಗ್ಯ ಸೇವೆ, ಮಹಿಳೆಯರಿಗೆ ಸಂಪೂರ್ಣ ಸುರಕ್ಷತೆಯನ್ನು ಆ ನಾಯಕತ್ವ ಅನುಷ್ಠಾನಗೊಳಿಸಬೇಕು. ಇಂತಹ ವಾತಾವರಣ ಸೃಷ್ಟಿಯಾದರೆ, ಭವಿಷ್ಯದಲ್ಲಿ ಯಾರು, ಯಾರಿಗೂ ರಾಷ್ಟ್ರೀಯತೆ ಹೇರಬೇಕಾಗಿಲ್ಲ. ಅದು ತನ್ನಿಂದ ತಾನೇ ಪ್ರವಹಿಸುತ್ತದೆ.  • ಮೋದಿ ಸರ್ಕಾರ ಬಂದ ಬಳಿಕ ರಾಷ್ಟ್ರೀಯತೆ ಅತಿಯಾಗಿದೆ ಅಥವಾ ಹೇರಿಕೆಯಾಗುತ್ತಿದೆ ಎಂದು ನಿಮಗೇನಾದರೂ ಭಾಸವಾಗುತ್ತಿದೆಯೇ ?

ಭಾರತೀಯರು ಯಾವತ್ತಿದ್ದರೂ ದೇಶಭಕ್ತರಾಗಿದ್ದಾರೆ. ಸಾಮ್ರಾಜ್ಯಶಾಹಿ ಆಡಳಿತ ಮತ್ತು ಸ್ವಾತಂತ್ರ್ಯ ಹೋರಾಟಕ್ಕೆ ಒಂದು ಸುದೀರ್ಘ ಇತಿಹಾಸವಿದೆ. ದೇಶಕ್ಕಾಗಿ ನಡೆದಿದ್ದ ಬಲಿದಾನ ಪ್ರತಿಯೊಬ್ಬರಿಗೂ ಗೊತ್ತಿದೆ. ನಾವೆಲ್ಲರೂ ದೇಶದ ಧ್ವಜ, ರಾಷ್ಟ್ರಗೀತೆ ಮತ್ತು ರಾಷ್ಟ್ರದ ಚಿಹ್ನೆಗೆ ಗೌರವ ನೀಡುತ್ತೇವೆ.  • ಮೋದಿ ಸರ್ಕಾರ ಎನ್‍ಜಿಒ ಮತ್ತು ಅವುಗಳಿಗೆ ಹರಿದು ಬರುವ ಅನುದಾನ ನಿಧಿ ತಡೆಯಲು  ಕಠಿಣ ಕ್ರಮ ಕೈಗೊಂಡಿದೆ. ಇದು ಎಷ್ಟರ ಮಟ್ಟಿಗೆ ಸರಿ ?

ಯಾವುದೇ ನಾಗರಿಕ ಸಮಾಜಕ್ಕೆ ಇಂತಹ ಸಂಘಟನೆಗಳು ಮಹತ್ವದ್ದಾಗಿವೆ. ಇವುಗಳು ಸರ್ಕಾರ ಮತ್ತು ಸಾಮಾನ್ಯ ಜನರ ಮಧ್ಯೆ ಸೇತುವಿನಂತೆ ಕೆಲಸ ಮಾಡುತ್ತಿದೆ. ರಾಷ್ಟ್ರ ಮತ್ತು ಸಮಾಜದ ಏಳ್ಗೆಗೆ ಸರ್ಕಾರ ಮತ್ತು ಎನ್‍ಜಿಒಗಳ ಮಧ್ಯೆ ಉತ್ತಮ ಸಹಕಾರದ ಅಗತ್ಯವಿದೆ.