ಮಹಿಳೆಯರ ಮೇಲಿನ ದಾಳಿ : ಮಂಗಳೂರಿಗೆ ಟಾಪ್ ಸ್ಥಾನ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಶಿಕ್ಷಣ ಕಾಶಿ ಎಂದೇ ಕರೆಯಲ್ಪಡುತ್ತಿರುವ ಮಂಗಳೂರು ಸುಸಂಸ್ಕøತರ ನಾಡು ಎಂದು ಬಣ್ಣಿಸಲ್ಪಡುತ್ತಿದೆ. ಆದರೆ ಸಾಂತ್ವನ ಕೇಂದ್ರದಲ್ಲಿ ದಾಖಲಾಗಿರುವ ಅಂಕಿ ಅಂಶಗಳ ಪ್ರಕಾರ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ನಂಬರ್ ಒನ್ ಎನ್ನುವ ಕಳಂಕ ಹೊತ್ತುಕೊಂಡಿದೆ.

ಜಿಲ್ಲೆಯ ಐದು ತಾಲೂಕಿನಲ್ಲಿ ಕಳೆದ ಐದು ವರ್ಷಗಳಲ್ಲಿ ಒಟ್ಟು 4312 ಪ್ರಕರಣಗಳು ದಾಖಲಾಗಿದ್ದರೆ, ಮಂಗಳೂರು ತಾಲೂಕಿನಲ್ಲೇ 1481 ಮಹಿಳಾ ದೌರ್ಜನ್ಯ ಪ್ರಕರಣ ದಾಖಲಾಗಿರುವುದು ವಿಶೇಷವಾಗಿದೆ. ಎರಡನೇ ಸ್ಥಾನದಲ್ಲಿ ಬೆಳ್ತಂಗಡಿ (1,072) ಇದ್ದರೆ, ಪುತ್ತೂರು ತೃತೀಯ (997) ಮತ್ತು ಸುಳ್ಯ (762) ಪ್ರಕರಣ ದಾಖಲಾಗಿದೆ. ಆದರೆ ಬಂಟ್ವಾಳದಲ್ಲಿ ಇತ್ತೀಚೆಗಷ್ಟೇ ಜನಸಾಂತ್ವನ ಕೇಂದ್ರ ಪ್ರಾರಂಭಗೊಂಡಿರುವ ಹಿನ್ನೆಲೆಯಲ್ಲಿ ಇಲ್ಲಿ ಸರ್ವೆಯನ್ನು ಮಾಡಿಲ್ಲ.

ವರದಕ್ಷಿಣೆ, ಲೈಂಗಿಕ ದೌರ್ಜನ್ಯ, ಕೌಟುಂಬಿಕ ಕಲಹಗಳು, ಬಹುಪತ್ನಿತ್ವ, ವಿಚ್ಛೇದನ ಪ್ರಕರಣಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ  ಪ್ರಕರಣಗಳು ಪೊಲೀಸ್ ಠಾಣೆ ಮತ್ತು ನ್ಯಾಯಾಲಯದಲ್ಲಿ ದಾಖಲಾಗಿರುವುದನ್ನು ಸಾಂತ್ವನ ಕೇಂದ್ರ ದಾಖಲಿಸಿಕೊಂಡಿದೆ. ಆದರೆ ಇದರಲ್ಲಿ ನಾಲ್ಕು ತಾಲೂಕುಗಳಲ್ಲೂ ಹೆಚ್ಚಾಗಿ ಎಲ್ಲವೂ ಕೌಟುಂಬಿಕ ದ್ವೇಷದಿಂದ ಪ್ರಕರಣಗಳೇ ದಾಖಲಾಗಿದೆ.

1481 ಪ್ರಕರಣಗಳನ್ನು ಪ್ರಜ್ಞಾ ಕೌನ್ಸೆಲಿಂಗ್ ಸೆಂಟರ್ ದಾಖಲಿಸಿಕೊಂಡಿದ್ದು, ಇವುಗಳಲ್ಲಿ 1437 ಪ್ರಕರಣಗಳು ಕೌಟುಂಬಿಕ ದ್ವೇಷಕ್ಕೆ ಒಳಪಟ್ಟಿವೆ. 2012ರಲ್ಲಿ 180 ಪ್ರಕರಣಗಳು, 2013ರಲ್ಲಿ 241, 2014ರಲ್ಲಿ 403, 2015ರಲ್ಲಿ 300 ಮತ್ತು 2016 315 ಪ್ರಕರಣ ದಾಖಲಾಗಿದೆ.

ಕಳೆದ ಐದು ವರ್ಷಗಳಲ್ಲಿ ಬೆಳ್ತಂಗಡಿಯಲ್ಲಿ 1072 ಪ್ರಕರಣಗಳನ್ನು ಮಹಿಳಾ ಮಂಡಲ ಒಕ್ಕೂಟ ದಾಖಲಿಸಿಕೊಂಡಿದೆ. ಇವುಗಳಲ್ಲಿ 865 ಪ್ರಕರಣಗಳು ಕೌಟುಂಬಿಕ ದೌರ್ಜನ್ಯಕ್ಕೊಳಪಟ್ಟವು. ಇದೇ ಅವಧಿಯಲ್ಲಿ ಪುತ್ತೂರಿನಲ್ಲಿ ಜನಶಿಕ್ಷಣ ಟ್ರಸ್ಟ್ 997 ಪ್ರಕರಣ ದಾಖಲಿಸಿಕೊಂಡರೆ, 989 ಪ್ರಕರಣಗಳು ಕೌಟುಂಬಿಕ ವಿವಾದಗಳಿಂದ ಕೂಡಿದ್ದು. 2012-13ರಲ್ಲಿ ಸುಳ್ಯದಲ್ಲಿ ಮಹಿಳಾ ಸಮಾಜವು 762 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದರೆ, 625 ಪ್ರಕರಣಗಳು ಕೌಟುಂಬಿಕ ದ್ವೇಷಕ್ಕೆ ಒಳಪಟ್ಟವು.

ಸುಳ್ಯ ಮತ್ತು ಬೆಳ್ತಂಗಡಿಯಲ್ಲಿನ ಹೆಚ್ಚಿನ ಪ್ರಕರಣಗಳು ಪೊಲೀಸ್ ಠಾಣೆಗಳಲ್ಲಿ ದಾಖಲಾದ ಪ್ರಕರಣಗಳಾಗಿದ್ದರೆ, ಮಂಗಳೂರು , ಪುತ್ತೂರಿನಲ್ಲಿ ಕಡಿಮೆ ಸಂಖ್ಯೆಯಿಂದ ಕೂಡಿದೆ.

ದಂಪತಿಗಳ ನಡುವಿನ ಶೈಕ್ಷಣಿಕ ತಾರತಮ್ಯ, ವೇತನ ಪಡೆಯುವಿಕೆಯಲ್ಲಿನ ವ್ಯತ್ಯಾಸಗಳು, ಮದುವೆಯ ಬಳಿಕ ಗ್ರಾಮೀಣ ಭಾಗದಲ್ಲಿ ಇರಲು ಹಿಂದೇಟು, ತಮ್ಮದೇ ಕನಸುಗಳನ್ನು ಕಟ್ಟಿಕೊಂಡು ಅದು ಈಡೇರದೇ ಇದ್ದಾಗ ನಡೆಯುವ ಪ್ರಕರಣಗಳೇ ಹೆಚ್ಚಾಗಿ ಮಹಿಳೆಯರ ಮೇಲಿನ ದೌರ್ಜನ್ಯ ಹಾಗೂ ವಿಚ್ಛೇದನಕ್ಕೆ ಪ್ರಮುಖ ಕಾರಣ ಎಂದು ತಿಳಿದು ಬಂದಿದೆ.