ಮುಚ್ಚುಗಡೆ ಭೀತಿಯಲ್ಲಿ ಎಟಿಎಂ ಕೇಂದ್ರಗಳು

ಬೆಂಗಳೂರು : ಎಟಿಎಂ ಕೇಂದ್ರಗಳು ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿವೆ. ನೋಟು ಅಮಾನ್ಯಗೊಂಡು ಬರೋಬ್ಬರಿ ಎರಡು ತಿಂಗಳು ಕಳೆದರೂ ವ್ಯವಸ್ಥೆ ಸುಧಾರಣೆಯಾಗಿಲ್ಲ. ಬ್ಯಾಂಕುಗಳಿಗೆ ಇನ್ನೂ ಸರಿಯಾಗಿ ಹಣ ಪೂರೈಕೆ ಆಗದಿರುವ ಕಾರಣ ರಾಜ್ಯದ ಸರಿಸುಮಾರು ಶೇ 70ರಷ್ಟು ಎಟಿಎಂ ಕೇಂದ್ರಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಈ ಸಮಸ್ಯೆಯಿಂದಾಗಿ ಹಲವು ಬ್ಯಾಂಕುಗಳು ತಮ್ಮ ಎಟಿಎಂ ಕೇಂದ್ರಗಳ ಬಾಗಿಲು ಹಾಕತೊಡಗಿವೆ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ.

ಎಟಿಎಂ ಕೇಂದ್ರಗಳಿಗೆ ಇದೀಗ ಹಣ ತುಂಬುತ್ತಿಲ್ಲ. ಪ್ರಮುಖ ರಸ್ತೆಗಳು ಮತ್ತು ವ್ಯವಹಾರ ಕೇಂದ್ರಗಳ ಬಳಿ ಇರುವ ಎಟಿಎಂ ಕೇಂದ್ರಗಳಿಗಷ್ಟೇ ಹಣ ಪೂರೈಕೆ ಮಾಡಲಾಗುತ್ತಿದ್ದು, ಇಂತಹ ಎಟಿಎಂ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಉಳಿದ ಶೇ 70ರಷ್ಟು ಎಟಿಎಂ ಕೇಂದ್ರಗಳು ಬಾಗಿಲು ಹಾಕಲು ಸನ್ನದ್ಧವಾಗಿವೆ ಎಂದು ಹಲವು ಬ್ಯಾಂಕುಗಳ ಅಧಿಕಾರಿಗಳು ಹೇಳುತ್ತಿದ್ದಾರೆ. ಅನೇಕ ಎಟಿಎಂ ಕೇಂದ್ರಗಳು ಮುಚ್ಚಿವೆ. ಆದರೆ ಕೇವಲ ಭದ್ರತಾ ಸಿಬ್ಬಂದಿಗಳು ಇವುಗಳನ್ನು ಕಾಯುತ್ತಿದ್ದಾರಷ್ಟೇ ಎಂದು ಅವರು ಹೇಳಿದ್ದಾರೆ.

ಡಿಜಿಟಲ್ ಪಾವತಿ ವ್ಯವಸ್ಥೆಯಡಿ ಜಾರಿಗೆ ತಂದ ನಂತರ ಎಟಿಎಂ ಕೇಂದ್ರಗಳಿಂದ ಗ್ರಾಹಕರಿಗೆ ಬಹಳಷ್ಟು ಅನುಕೂಲಕರವಾಗಿತ್ತು. ಆದರೆ ನೋಟು ಅಮಾನ್ಯದ ಬಳಿಕ ಬ್ಯಾಂಕುಗಳು ನೂರಾರು ಎಟಿಎಂ ಕೇಂದ್ರಗಳನ್ನು ಮುಚ್ಚುವ ಬಗ್ಗೆ ಗಂಭೀರ ಚಿಂತನೆಗಳನ್ನು ಮಾಡುತ್ತಿವೆ. ಉಪಯೋಗಕ್ಕಿಲ್ಲದ ಎಟಿಎಂ ಕೇಂದ್ರಗಳ ನಿರ್ವಹಣೆಯೂ ಬ್ಯಾಂಕುಗಳಿಗೆ ಸವಾಲಾಗಿದೆ. ಇಲ್ಲಿ ದಿನದ 24 ಗಂಟೆಗಳ ಕಾಲ ಸೆಕ್ಯೂರಿಟಿ, ಸೀಸಿಟೀವಿ ನಿರ್ವಹಣೆ ಮಾಡಬೇಕಾಗಿದೆ. ಇದು ಆರ್ಥಿಕ ಹೊರೆಯನ್ನು ಹೆಚ್ಚು ಮಾಡುತ್ತಿದೆ. ನಗರದ ಜನತೆ ನಗದುರಹಿತ ವ್ಯವಹಾರಕ್ಕೆ ಮುಂದಾಗಿರುವುದರಿಂದ ಎಟಿಎಂ ಕೇಂದ್ರಗಳಿಗೆ ಬರುವ ಗ್ರಾಹಕರ ಸಂಖ್ಯೆಯೂ ಕಡಿಮೆಯಾಗಿದೆ. ಕಡಿಮೆ ವ್ಯವಹಾರ ನಡೆಸುವ ಎಟಿಎಂ ಕೇಂದ್ರಗಳನ್ನು ನಾವು ಮುಚ್ಚುತ್ತಿದ್ದೇವೆ ಎಂದು ಖಾಸಗಿ ಬ್ಯಾಂಕಿನ ಅಧಿಕಾರಿಯೊಬ್ಬರು ಹೇಳಿದ್ದಾರೆ.