ಎಟಿಎಂ ಕಳ್ಳ ಓರಿಸ್ಸಾದಲ್ಲಿ ಸೆರೆ

ನಮ್ಮ ಪ್ರತಿನಿಧಿ ವರದಿ

ಶಿರಸಿ : ಶಿರಸಿ ಸಹಿತ ರಾಜ್ಯದ ವಿವಿಧ ಕಡೆ ಎಟಿಎಂ ದರೋಡೆ ಮಾಡಿದ ಶಂಕಿತ ವ್ಯಕ್ತಿಯನ್ನು ಓರಿಸ್ಸಾ ಪೊಲೀಸರು ಬಂಧಿಸಿ, ವಿಚಾರಣೆ ನಡೆಸಿದ್ದಾರೆ. ಇದೀಗ ಶಿರಸಿ ಎಟಿಎಂ ದರೋಡೆ ಸಂಬಂಧ ಆತನನ್ನು ವಶಕ್ಕೆ ಪಡೆಯಲು ಶಿರಸಿ ಪೊಲೀಸ್ ತಂಡ ಓರಿಸ್ಸಾಕ್ಕೆ ಹೋಗಿದೆ.

ಇದೇ ವರ್ಷ ಮಾರ್ಚ್ 6ರ ಮಧ್ಯರಾತ್ರಿ ಶಿರಸಿಯ ಐಸಿಐಸಿಐ ಬ್ಯಾಂಕಿನ ಎಟಿಎಂ ದರೋಡೆ ಮಾಡಿ ಲಕ್ಷಾಂತರ ರೂ ಹಣವನ್ನು ದೋಚಿಹೋದ ಕಳ್ಳರು, ಕಾಲೇಜು ರಸ್ತೆಯಲ್ಲಿ ಹಾಗೂ ಜಾನ್ಮನೆಯ ಎಟಿಎಂ ಮುರಿಯಲು ಯತ್ನಿಸಿದ್ದರು. ಬಳಿಕ ಪೊಲೀಸರು ಹಲವು ತಂಡ ರಚಿಸಿ, ಕರ್ನಾಟಕದ ಹೊರತಾಗಿ ಓರಿಸ್ಸಾ, ಬಿಹಾರ, ಉತ್ತರಪ್ರದೇಶದ ತನಕವೂ ಶಿರಸಿ ಪೊಲೀಸ್ ತಂಡ ಹೋಗಿ ಕಳ್ಳರ ಶೋಧ ಕಾರ್ಯ ಮಾಡಿ ಬಂದಿತ್ತು. ಇದಾದನಂತರ ಹಾವೇರಿ, ಹುಬ್ಬಳ್ಳಿ, ದಾವಣಗೇರಿ ಸಹಿತ ರಾಜ್ಯದ ಹಲವೆಡೆ ಎಟಿಎಂ ದರೋಡೆ ಮುಂದುವರಿದಿತ್ತು.

ಇದೀಗ ಓರಿಸ್ಸಾ ಪೊಲೀಸರು ಬೇರೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಹಿಡಿದು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಎಟಿಎಂ ದರೋಡೆ ವಿಷಯ ತಿಳಿಸಿದ್ದಾನೆ. ಅದರಲ್ಲಿ ಕರ್ನಾಟಕದ ವಿಷಯವನ್ನು ಪ್ರಸ್ತಾಪಿಸಿದ್ದು, ಶಿರಸಿಯದ್ದು ಇವರೇ ಮಾಡಿರುವ ಸಂದೇಹದಡಿ ಶಿರಸಿ ಪೊಲೀಸ್ ತಂಡ ತುರ್ತಾಗಿ ಓರಿಸ್ಸಾಕ್ಕೆ ಹೋಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಅಲ್ಲಿಂದ ಅವರನ್ನು ತಂದು ಶಿರಸಿ ಪೊಲೀಸರು ವಿಚಾರಣೆ ನಡೆಸಿ, ಕದ್ದ ಹಣವು ಸಿಕ್ಕಿದ ನಂತರವೇ ಅಧಿಕೃತ ಘೋಷಣೆ ಮಾಡುವ ಸಾಧ್ಯತೆ ಇದೆ.