ಎಟಿಎಂ ವಂಚನೆ : ಇಬ್ಬರು ವಿದೇಶೀಯರ ಬಂಧನ

ಬೆಂಗಳೂರು : ಕ್ರೆಡಿಟ್ ಕಾರ್ಡ್ ವಂಚನೆಯ ಆರೋಪದಲ್ಲಿ ಸಿಐಡಿ ಅಧಿಕಾರಿಗಳು ಇಬ್ಬರು ವಿದೇಶಿ ನಾಗರಿಕರನ್ನು ಬಂಧಿಸಿದ್ದಾರೆ. ಆರೋಪಿಗಳಾದ ರೊಮಾನಿಯಾ ಪ್ರಜೆ ಡಾನ್ ಸಾಬಿಯನ್ ಕ್ರಿಶ್ಚಿಯನ್ (40) ಹಾಗೂ ಹಂಗೆರಿಯ ಮರೆ ಜನೋಸ್ (44) ಇಬ್ಬರೂ ಎಟಿಎಂ ಯಂತ್ರಗಳಿಗೆ ಸ್ಕಿಮ್ಮರ್ ಸಾಧನಗಳನ್ನು ಅಳವಡಿಸಿ ಕಾರ್ಡ್ ಮಾಹಿತಿಗಳನ್ನು ಕದಿಯುತ್ತಿದ್ದರು ಹಾಗೂ ಸ್ಪೈ ಕ್ಯಾಮರಾ ಮೂಲಕ ಪಿನ್ ಸಂಖ್ಯೆಯನ್ನೂ ಪಡೆಯುತ್ತಿದ್ದರೆನ್ನಲಾಗಿದೆ.

ಆರೋಪಿಗಳಿಬ್ಬರೂ ಟೂರಿಸ್ಟ್ ವೀಸಾ ಪಡೆದು ಭಾರತಕ್ಕೆ ಸೆಪ್ಟೆಂಬರ್ 1ರಂದು ಆಗಮಿಸಿ ಸೆಪ್ಟೆಂಬರ್ 19ರಂದು ಹಿಂದಿರುಗುವವರಿದ್ದರು. ಬಹುರಾಷ್ಟ್ರೀಯ ಕಂಪೆನಿಯ ಬ್ಯಾಂಕೊಂದು ನೀಡಿದ ದೂರಿನ ಆಧಾರದಲ್ಲಿ ಬಂಧನ ನಡೆದಿತ್ತು.

ಎಂ ಜಿ ರೋಡಿನಲ್ಲಿರುವ ಬ್ಯಾಂಕಿನ ಎಟಿಎಂ ಕೇಂದ್ರವೊಂದರಲ್ಲಿ ಯಂತ್ರಕ್ಕೆ ಅಳವಡಿಸಲಾಗಿದ್ದ ಸ್ಕಿಮ್ಮರ್ ಸಾಧನವನ್ನು ಬ್ಯಾಂಕಿನ ಅಧಿಕಾರಿಗಳು ಪತ್ತೆ ಹಚ್ಚಿ ಪೊಲೀಸರಿಗೆ ನೀಡಿದ್ದರೆ ನಂತರ ಪೊಲೀಸರು ಇಂತಹುದೇ ಸಾಧನವನ್ನು  ವಿಮಾನ ನಿಲ್ದಾಣದಲ್ಲಿದ್ದ ಎಟಿಎಂ ಕೇಂದ್ರದಿಂದಲೂ ವಶಪಡಿಸಿಕೊಂಡಿದ್ದರು.

ನಂತರ ಅಧಿಕಾರಿಗಳು ಈ ಕೇಂದ್ರದ ಮೇಲೆ ತೀವ್ರ ನಿಗಾ ಇಟ್ಟಿದ್ದು ಮಂಗಳವಾರ ರಾರಿ 10 ಗಂಟೆ ಸುಮಾರಿಗೆ ಇಬ್ಬರು ವಿದೇಶೀಯರು ಈ ಎಟಿಎಂ ಕೇಂದ್ರದ ಸಮೀಪ ಶಂಕಾಸ್ಪದವಾಗಿ ತಿರುಗುತ್ತಿರುವುದನ್ನು ನೋಡಿ ಅವರನ್ನು ಬಂಧಿಸಲು ಮುಂದಾದಾಗ ಆವರು ಟ್ಯಾಕ್ಸಿಯೊಂದರಲ್ಲಿ ತಪ್ಪಿಸಿಕೊಂಡು ಹೋಗಲು ಯತ್ನಿಸಿದರೂ ಅವರನ್ನು ಸೆರೆ ಹಿಡಿಯಲಾಯತು.

ಇಂಗ್ಲೆಂಡಿನಿಂದ ಕಾರ್ಯಾಚರಿಸುವ ತಮ್ಮ ಸಹವರ್ತಿಗಳ ನಿರ್ದೇಶನದಂತೆ ತಾವು ಈ ಕೃತ್ಯ ನಡೆಸುತ್ತಿದ್ದುದಾಗಿ ಅವರು ವಿಚಾರಣೆ ವೇಳೆ ಹೇಳಿಕೊಂಡಿದ್ದಾರೆನ್ನಲಾಗಿದೆ.