ಎಟಿಎಂನಿಂದ ಹರಿದ ನೋಟು

ಎಟಿಎಂ ನಲ್ಲಿ ದೊರಕಿರುವ ಒಂದು ಬದಿ ಹರಿದಿರುವ ಎರಡು ಸಾವಿರ ಮುಖ ಬೆಲೆಯ ಕರೆನ್ಸಿ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ರಾಷ್ಟ್ರಾದ್ಯಂತ ಸರಕಾರ ಒಂದು ಸಾವಿರ ಹಾಗು ಐದು ನೂರರ ಕರೆನ್ಸಿಗಳನ್ನು ನಿಷೇಧಿಸಿದ ಬಳಿಕ ಹೊರತಂದಿರುವ ಎರಡು ಸಾವಿರ ಮುಖ ಬೆಲೆಯ ಹೊಸ ನೋಟುಗಳು ಜನ ಸಾಮಾನ್ಯರ ಮಧ್ಯೆ ಹಲವು ಗೊಂದಲ, ಸಮಸ್ಯೆಗಳಿಗೆ ಕಾರಣವಾಗಿದ್ದು, ಈ ನಡುವೆ ಎಟಿಎಂಗಳ ಮೂಲಕ ಹೊಸ ಕರೆನ್ಸಿ ನೋಟುಗಳು ಲಭಿಸಲು ತೊಡಗಿ ಇದೀಗ ಸಹಜ ಸ್ಥಿತಿಗೆ ಬರುತ್ತಿದೆ. ಆದರೆ ಶನಿವಾರ ಮುಳ್ಳೇರಿಯಾದ ಎಟಿಎಂ ಕೇಂದ್ರವೊಂದರಲ್ಲಿ ಗ್ರಾಹಕರಿಗೆ ಲಭಿಸಿದ ಎರಡು ಸಾವಿರ ಕರೆನ್ಸಿಯ ಒಂದು ಬದಿ ಹರಿದಿರುವುದು ನೋಟಿನ ಬಾಳ್ವಿಕೆಯ ಸಂಕೇತವೆಂಬಂತೆ ಹಲವರ ಕುಚೋದ್ಯಕ್ಕೆ ಕಾರಣವಾಗಿದೆ. ಆ ಗ್ರಾಹಕರು ನೋಟನ್ನು ಮರಳಿ ಬ್ಯಾಂಕಿಗೆ ಹಸ್ತಾಂತರಿಸಿದ್ದು, ಬದಲಿಯಾಗಿ ಸುಸ್ಥಿತಿಯ ಕರೆನ್ಸಿಯನ್ನು ಮರಳಿಸಿದೆ.