60 ಲಕ್ಷ ರೂ ಮೌಲ್ಯದ ಇಲೆಕ್ಟ್ರಾನಿಕ್ ಉಪಕರಣ ಕದಿಯಲು ಸಲಹೆ ನೀಡಿದ ಜ್ಯೋತಿಷಿ ಸಹಿತ 5 ಮಂದಿ ಅರೆಸ್ಟ್

ಬೆಂಗಳೂರು : ಸುಮಾರು ರೂ 60 ಲಕ್ಷ ಮೌಲ್ಯದ ಇಲೆಕ್ಟ್ರಾನಿಕ್ ವಸ್ತುಗಳನ್ನು ಕದಿಯುವಂತೆ ವ್ಯಕ್ತಿಯೊಬ್ಬನಿಗೆ ಸಲಹೆ ನೀಡಿದ ಜ್ಯೋತಿಷಿ ಸಹಿತ ಐದು ಮಂದಿ ಈಗ ಜೈಲುಗಂಬಿ ಎಣಿಸುತ್ತಿದ್ದಾರೆ.

ಬಂಧಿತರನ್ನು ಜ್ಯೋತಿಷಿ ಕೃಷ್ಣರಾಜು (58), ಆತನ ಗ್ರಾಹಕ ದಾಮೋದರನ್ (42), ರಾಮದಾಸ (38), ಶರವಣ (40) ಹಾಗೂ ಸೀನು (34) ಎಂದು ಗುರುತಿಸಲಾಗಿದೆ. ನಗರದ ಸೂಪರ್ ಇಲೆಕ್ಟ್ರಾನಿಕ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯಲ್ಲಿ ಸ್ಟೋರ್ ಇನ್ ಚಾರ್ಜ್ ಆಗಿದ್ದ ದಾಮೋದರನ್ ತನ್ನ ಮಾಲಕನ ವಿಶ್ವಾಸ ಸಂಪಾದಿಸಿದ್ದ. ಈತನ್ಮಧ್ಯೆ ಹೆಚ್ಚಿನ ಹಣ ಸಂಪಾದಿಸಬೇಕೆಂಬ ಆಸೆಯಿಂದ ಜ್ಯೋತಿಷಿ ಕೃಷ್ಣರಾಜುವನ್ನು ಸಂಪರ್ಕಿಸಿ ತನಗೆ ಶ್ರೀಮಂತನಾಗಬೇಕೆಂಬ ಕನಸಿದೆಯೆಂದು ಹೇಳಿಕೊಂಡಿದ್ದ. ಶ್ರಾವಣ ಮಾಸದ ಆರಂಭದಿಂದ ದಾಮೋದರನ್ ಅದೃಷ್ಟ ಖುಲಾಯಿಸುವುದು, ಕದ್ದರೂ ಸಿಕ್ಕಿ ಬೀಳುವ ಸಾಧ್ಯತೆಯಿಲ್ಲ ಎಂದು ಜ್ಯೋತಿಷಿ ಆತನನ್ನು ನಂಬಿಸಿದ್ದ. ಅಂತೆಯೇ ತನ್ನ ಸಂಸ್ಥೆಗೆ ಡೆಲ್ ಕಂಪೆನಿಗೆ ಹಸ್ತಾಂತರಿಸಲೆಂದು ಶ್ರೀಪೆರಂಬದೂರಿನಿಂದ 1000 ಕಂಪ್ಯೂಟರ್ ಮಾನಿಟರುಗಳು ಬರುವುದೆಂದು ದಾಮೋದರನ್ ಜ್ಯೋತಿಷಿಗೆ ಹೇಳಿದಾಗ ಅದನ್ನು ಮಾರುವಂತೆ ಸಲಹೆ ನೀಡಿದ್ದನಲ್ಲದೆ ಅದೃಷ್ಟ ತರಲೆಂದು ಆತನಿಗೆ ಎರಡು ನಿಂಬೆ ಹಣ್ಣು ಕೂಡ ನೀಡಿದ್ದ. ಆತ ತನ್ನ ಸಹವರ್ತಿಗಳ ಸಹಾಯದಿಂದ ಮಾನಿಟರುಗಳನ್ನು ವಿವಿಧ ಸಂಸ್ಥೆಗಳಿಗೆ ಮಾರಾಟ ಮಾಡಿದ್ದ. ಆತನ ಮಾಲಕ ಪೊಲೀಸ್ ದೂರು ನೀಡಿದ ನಂತರ ಐವರನ್ನೂ ಬಂಧಿಸಲಾಗಿದೆ. ಆರೋಪಿಗಳು 12 ಮಂದಿ ಉದ್ಯಮಿಗಳಿಗೆ ಮಾರಾಟ ಮಾಡಿದ 671 ಮಾನಿಟರ್ ಹಾಗೂ ರೂ 10 ಲಕ್ಷ ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.