ಪೆಟ್ಟು ತಿಂದರೂ ಸಂಸದನ ವಿರುದ್ಧ ದೂರು ದಾಖಲಿಸಲು ಹಿಂಜರಿದ ಶಿರಸಿ ವೈದ್ಯರು

ಸಂಸದನಿಂದ ಹಲ್ಲೆಗೀಡಾದ ವೈದ್ಯರು ಮತ್ತು ಸಿಬ್ಬಂದಿ

ನಮ್ಮ ಪ್ರತಿನಿಧಿ ವರದಿ

ಶಿರಸಿ : ಇಲ್ಲಿಯ ಟಿ ಎಸ್ ಎಸ್ ವೈದ್ಯರ ಮೇಲೆ ಸಂಸದ ಅನಂತ ಹೆಗಡೆ ಹಲ್ಲೆ ನಡೆಸಿದ ಸಂಬಂಧ 2ನೇ ದಿನವೂ ಹಲ್ಲೆಗೊಳಗಾದ ವೈದ್ಯರಾಗಲಿ, ಆಸ್ಪತ್ರೆ ಸಮಿತಿಯಿಂದ ಅಥವಾ ಐಎಂಎ.ಯಿಂದ ಪೊಲೀಸ್ ದೂರು ದಾಖಲಾಗಿಲ್ಲ ಎಂಬುದು ಗೊತ್ತಾಗಿದೆ.

ಸಂಸದ ಅನಂತ ಹೆಗಡೆ ಅವರು ತಮ್ಮ ತಾಯಿ ಚಿಕಿತ್ಸೆ ವಿಷಯದಲ್ಲಿ ಅಲಕ್ಷ್ಯ ತೋರಿದ್ದಾರೆಂಬ ಕಾರಣಕ್ಕೆ ಆಸ್ಪತ್ರೆಗೆ ಬಂದು ವೈದ್ಯರ ಮೇಲೆ ಹಲ್ಲೆ ನಡೆಸಿದ್ದರು. ಹಲ್ಲೆಗೊಳಗಾದ ವೈದ್ಯರನ್ನು ತಕ್ಷಣ ಸರ್ಕಾರಿ ಆಸ್ಪತ್ರೆಗೆ ಕರದುಕೊಂಡು ಹೋಗಿ ಪ್ರಥಮ ಹಂತದ ಚಿಕಿತ್ಸೆ ಮಾಡಿಸಲಾಗಿತ್ತು. ಆಗ ಸರ್ಕಾರಿ ನಿಯಮದಂತೆ ಪೊಲೀಸರಿಗೆ ಮಾಹಿತಿ ಹೋಗಿತ್ತು. ಮಾಹಿತಿ ಆಧರಿಸಿ ಬುಧವಾರ ಶಿರಸಿ ಪೊಲೀಸ್ ಅಧಿಕಾರಿಗಳು ಹಲ್ಲೆಗೊಳಗಾದ ಮೂವರನ್ನು ಭೇಟಿಯಾಗಿ ಮಾಹಿತಿ ಪಡೆದಿದ್ದಾರೆ. ಈ ಸಂದರ್ಭದಲ್ಲಿ ಹಲ್ಲೆಗೊಳಗಾದವರು ಸಂಸದ ಅನಂತ ಹೆಗಡೆ ವಿರುದ್ಧ ಯಾವುದೇ ದೂರು ನೀಡಲು ನಿರಾಕರಿಸಿದರು ಎಂದು ಪ್ರತ್ಯಕ್ಷದರ್ಶಿಗಳಿಂದ ಗೊತ್ತಾಗಿದೆ.

ಐಎಂಎ ಅಧ್ಯಕ್ಷ ಡಾ ಕೈಲಾಸ ಪೈ ಅವರನ್ನು ಬುಧವಾರ ಮಾತನಾಡಿಸಿದಾಗ, “ನಾವು ನಿನ್ನೆಯೇ ಶಿರಸಿ ಟಿ ಎಸ್ ಎಸ್ ಆಡಳಿತ ಮಂಡಳಿ ಜತೆಗೆ ಚರ್ಚಿಸಿದ್ದೇವೆ. ವೈದ್ಯರ ರಕ್ಷಣೆಗೆ ಮನವಿ ಮಾಡಲಾಗಿದೆ. ಅವರು ಆಡಳಿತ ಮಂಡಳಿ ಕೊಡಲು ಬರುವದಿಲ್ಲ. ವೈದ್ಯರೇ ನೀಡಬೇಕು ಎನ್ನುತ್ತಿದ್ದಾರೆ. ರಾಜ್ಯ ಐಎಂಎ ಅಧ್ಯಕ್ಷರು, ಐಎಂಎ ಕಾನೂನು ವಿಭಾಗದ ಪ್ರಮುಖರ ಗಮನಕ್ಕೆ ವಿಷಯ ಒಯ್ದಿದ್ದೇವೆ. ಅವರು ರಾಜ್ಯ ಸಭೆಯಲ್ಲಿ ತೀರ್ಮಾನಿಸಿ ತಿಳಿಸುತ್ತೇವೆ ಎಂದಿದ್ದಾರೆ. ಇನ್ನೂವರೆಗೂ ಯಾವದೇ ಸೂಚನೆ ಬಂದಿಲ್ಲ. ವೈದ್ಯರ ಮೇಲೆ ಹಲ್ಲೆ ಆಗದಂತೆ ತಡೆಯುವದು. ಅವರ ರಕ್ಷಣೆಗೆ ನಿಲ್ಲುವದು ಸಂಘದ ಜವಾಬ್ದಾರಿ. ರಾಜ್ಯ ಸಂಘವೇ ದೂರು ನೀಡಲು ಸೂಚಿಸಿದರೆ ಮುಂದೆ ಅದನ್ನು ನಿರ್ಧರಿಸಲಾಗುತ್ತದೆ” ಎಂದರು.

ಈ ಬಗ್ಗೆ ಶಿರಸಿ ಡಿವೈಎಸ್ಪಿ ನಾಗೇಶ ಶೆಟ್ಟಿ ಅವರನ್ನು ಬುಧವಾರ ಕೇಳಿದಾಗ, “ಹಲ್ಲೆಗೊಳಗಾದವರು ದೂರು ನೀಡಬೇಕಾಗುತ್ತದೆ. ವ್ಯಕ್ತಿಗಳು ಇರುವದರಿಂದ ಸ್ವಯಂಪ್ರೇರಿತ ಪ್ರಕರಣ ಮಾಡಲು ಬರುವದಿಲ್ಲ. ಇಂದು ಸಹ ವೈದ್ಯರ ಜತೆ ಮಾತನಾಡಿದಾಗ ಅವರು ಯಾವದೇ ದೂರು ನೀಡಲು ಸಿದ್ಧರಿಲ್ಲ ಎಂದಿದ್ದಾರೆ. ನಾವು ದೂರು ಕೊಟ್ಟರೆ ಸ್ವೀಕರಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ” ಎಂದರು.

ರಾಜ್ಯ ಐಎಂಎ ಅಧ್ಯಕ್ಷ ರವೀಂದ್ರ ಅವರು ಖಾಸಗಿ ಟೀವಿ ಸಂದರ್ಶನವೊಂದರಲ್ಲಿ ಸಂಸದ ಅನಂತ ಹೆಗಡೆ ಮೇಲೆ ಪ್ರಕರಣ ಐಎಂಎ ಮಾಡಲಿದೆ ಎಂದು ಹೇಳಿದ್ದರು. ಆದರೆ ಈ ಬಗ್ಗೆ ಶಿರಸಿ ಐಎಂಎಗೆ ಯಾವದೇ ಸೂಚನೆ ಬಂದಿಲ್ಲ. ಒಟ್ಟಾರೆ ಮುಂದೆ ಈ ಘಟನೆ ಯಾವ ಸ್ವರೂಪ ತಾಳುತ್ತದೆ ಎಂಬುದು ಕಾದುನೋಡಬೇಕಿದೆ. ವಿಪಕ್ಷಗಳು ಸಹ ತೀವ್ರ ಅಸಮಾಧಾನ ಹೊರಹಾಕದೇ ಇರುವದರಿಂದ ಪ್ರಕರಣ ಗಂಭೀರ ರೂಪಕ್ಕೆ ಹೋಗುವದು ಕಷ್ಟ ಎಂಬ ಮಾತು ಕೇಳಿಬಂದಿದೆ.