ಅಜ್ಞಾತವಾಸ ಅಂತ್ಯಗೊಳಿಸಲು ನಿರ್ಧರಿಸಿದ ಅಸ್ನೋಟಿಕರ್

ನಮ್ಮ ಪ್ರತಿನಿಧಿ ವರದಿ

ಕಾರವಾರ : ತಮ್ಮ ಮನೆಯ ಮುಂದೆ ಧರಣಿ ಕುಳಿತ ತಮ್ಮ ಹಲವಾರು ಅಭಿಮಾನಿಗಳ ಒತ್ತಾಯಕ್ಕೆ ಮಣಿದು ಮಾಜಿ ಸಚಿವ ಆನಂದ ಆಸ್ನೋಟಿಕರ್ ರಾಜಕೀಯದಲ್ಲಿ ಮತ್ತೆ ಸಕ್ರಿಯವಾಗಲು ನಿರ್ಧರಿಸಿದ್ದಾರೆ. ನೂರಾರು ಮಂದಿ ಅವರ ಮನೆಯ ಮುಂದೆ ಎರಡು ತಾಸುಗಳಿಗೂ ಹೆಚ್ಚು ಕಾಲ ಧರಣಿ ಕುಳಿತಿದ್ದಾಗ ಅಲ್ಲಿಗೆ ಬಂದ ಆಸ್ನೋಟಿಕರ್ ಮೊದಲು ಅವರ ಬೇಡಿಕೆಗೆ ಸ್ಪಂದಿಸಲು ನಿರಾಕರಿಸಿದರೂ ತಮ್ಮ ಬೇಡಿಕೆ ಈಡೇರುವತನಕ ಸ್ಥಳ ಬಿಟ್ಟು ಕದಲುವುದಿಲ್ಲ ಎಂದು ಅಭಿಮಾನಿಗಳು ಪಟ್ಟುಹಿಡಿದ ನಂತರ ತಮ್ಮ ನಿಲುವು ಬದಲಿಸಿ ಮುಂದಿನ ಕೆಲ ದಿನಗಳಲ್ಲಿ ತಾವು ಯಾವ ಪಕ್ಷ ಸೇರಲಿರುವುದಾಗಿ ಸ್ಪಷ್ಟಪಡಿಸುವುದಾಗಿ ತಿಳಿಸಿದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿ ಸತೀಶ್ ಸೈಲ್ ವಿರುದ್ಧ 40,000 ಮತಗಳ ಅಂತರದಿಂದ ಸೋತ ಬಳಿಕ ನಾಲ್ಕೂವರೆ ವರ್ಷಗಳಿಂದ ಸಕ್ರಿಯ ರಾಜಕಾರಣದಿಂದ ಆಸ್ನೋಟಿಕರ್ ದೂರ ಸರಿದು ಬೆಂಗಳೂರಿನಲ್ಲಿ ನೆಲಸಿದ್ದರು. ಬಿಜೆಪಿಗೆ ರಾಜೀನಾಮೆ ನೀಡದೇ ಇದ್ದರೂ ಪಕ್ಷ ಚಟುವಟಿಕೆಗಳಿಂದ ದೂರವೇ ಉಳಿದಿದ್ದರು. ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಪಕ್ಷ ನಾಯಕತ್ವ ವಿರುದ್ಧ ಮೂರು ಬಾರಿ ಸಿಡಿದೆದ್ದಿದ್ದರು ಎಂಬ ನೆಪದ ಮೇಲೆ ಈಗ ಬಿಜೆಪಿ ಮುಂದಿನ ಚುನಾವಣೆಗೆ ಸ್ಪರ್ಧಿಸಲು ಅವರಿಗೆ ಟಿಕೆಟ್ ನೀಡುವುದಿಲ್ಲವೆಂದು ಹೇಳಿದೆಯೆನ್ನಲಾಗಿದೆ.

ಕಳೆದೈದು ವರ್ಷಗಳಲ್ಲಿ ಆಸ್ನೋಟಿಕರ್ ಹಲವಾರು ಬಾರಿ ಕಾಂಗ್ರೆಸ್ ಕದವನ್ನು ತಟ್ಟಿದ್ದರೂ ಪ್ರಯೋಜನವಾಗಿಲ್ಲ. 2008ರಲ್ಲಿ ಕಾಂಗ್ರೆಸ್ ಪಕ್ಷದಿಂದ ಚುನಾವಣೆ ಗೆದ್ದ ಕೇವಲ 40 ದಿನಗಳಲ್ಲಿ ಅವರು ಆಪರೇಷನ್ ಕಮಲ ಮೂಲಕ ಬಿಜೆಪಿ ಸೇರಿದ್ದ ಮೂವರು ಶಾಸಕರಲ್ಲಿ ಒಬ್ಬರಾಗಿದ್ದರಲ್ಲದೆ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಿದ್ದರು. ಇದೀಗ ಜೆಡಿಎಸ್ ಸೇರಿ ಅದರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಅವರಿಗೆ ವೇದಿಕೆ ಸಿದ್ಧವಾಗಿದೆ.