ಜೈಪುರ `ವಂದೇ ಮಾತರಂ’ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜದ ಅಶೋಕ ಚಕ್ರವೇ ನಾಪತ್ತೆ !

ಕಾರ್ಯಕ್ರಮ ತನ್ನ ಉದ್ದೇಶ ಈಡೇರಿಸುವಲ್ಲಿ ವಿಫಲವಾಗಿದೆಯೆಂದು ಹೊರನೋಟಕ್ಕೆ ಸ್ಪಷ್ಟವಾಗಿದ್ದರೂ ಆಯೋಜಕ ಸಂಸ್ಥೆಯಾದ ಹಿಂದೂ ಸ್ಪಿರಿಚುವಲ್ ಎಂಡ್ ಸರ್ವಿಸ್ ಫೇರ್ ಹೇಳಿಕೆಯೊಂದನ್ನು ನೀಡಿ, “ಸಾವಿರಾರು ವಿದ್ಯಾರ್ಥಿ, ವಿದ್ಯಾರ್ಥಿನಿಯರು ವಂದೇ ಮಾತರಂ ಹಾಡಿ ದೇಶಭಕ್ತಿಯ ವಾತಾವರಣ ಸೃಷ್ಟಿಸಿದರು” ಎಂದು ಹೇಳಿದೆ.

ಜೈಪುರ್ : ವಿದ್ಯಾರ್ಥಿಗಳಲ್ಲಿ ದೇಶಭಕ್ತಿಯ ಭಾವನೆ ಬೆಳೆಸುವ ಉದ್ದೇಶದಿಂದ ರಾಜಸ್ಥಾನ ಸರಕಾರ ಜೈಪುರದಲ್ಲಿ ಬುಧವಾರ ಆಯೋಜಿಸಿದ್ದ ವಂದೇ ಮಾತರಂ ಕಾರ್ಯಕ್ರಮದಲ್ಲಿ ಸಾವಿರಾರು ವಿದ್ಯಾರ್ಥಿಗಳು ತಮ್ಮ ಕೈಗಳಲ್ಲಿ ಹಿಡಿದಿದ್ದ ರಾಷ್ಟ್ರಧ್ವಜದಲ್ಲಿ ಅಶೋಕ ಚಕ್ರ ಕಾಣೆಯಾಗಿರುವುದು ಭಾರೀ ಆಶ್ಚರ್ಯ ಹುಟ್ಟಿಸಿದೆ.

ಈ ಬಹು ದೊಡ್ಡ ಪ್ರಮಾದ ಇಷ್ಟೊಂದು ಸಂಖ್ಯೆಯ ರಾಷ್ಟ್ರಧ್ವಜಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಿದ ಕಾರ್ಯಕ್ರಮದ ಆಯೋಜಕರ ಕಣ್ಣಿಗೂ ಬೀಳದೇ ಇರುವುದು  ಹಲವಾರು ಪ್ರಶ್ನೆಗಳು ಮೂಡುವಂತೆ ಮಾಡಿದೆ. ಕಾರ್ಯಕ್ರಮವನ್ನು ರಾಜಸ್ಥಾನ ಯುವ ಮಂಡಳಿ, ಹಿಂದೂ ಸ್ಪಿರಿಚುವಲ್ ಎಂಡ್ ಸರ್ವಿಸ್ ಫೇರ್ ಹಾಗೂ ರಾಜಸ್ಥಾನ ಸರಕಾರದ ಸಹಯೋಗದೊಂದಿಗೆ ಆಚರಿಸಲಾಗಿತ್ತು. 50,000ಕ್ಕೂ ಹೆಚ್ಚು ಎನ್ನೆಸ್ಸೆಸ್, ಎನ್ ಸಿ ಸಿ, ಭಾರತ್ ಸ್ಕೌಟ್ಸ್ ಎಂಡ್ ಗೈಡ್ಸ್ ವಿದ್ಯಾರ್ಥಿಗಳು ದೇಶಭಕ್ತಿಯ ಜತೆ ಮಕ್ಕಳಲ್ಲಿ ಸಾಂಸ್ಕøತಿಕ ಮೌಲ್ಯಗಳನ್ನೂ ಬೆಳೆಸುವ ಉದ್ದೇಶ ಹೊಂದಿದ್ದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆದರೆ ರಾಷ್ಟ್ರಭಕ್ತಿ ಬೆಳೆಸುವ ಉದ್ದೇಶ ಹೊಂದಿದ ಈ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜದಲ್ಲಿ ಅಶೋಕ ಚಕ್ರವೇ ಇಲ್ಲದಿರುವುದು ವಿಪರ್ಯಾಸವೇ ಸರಿ. ಈ ಪ್ರಮಾದದ ಬಗ್ಗೆ ಆಯೋಜಕರನ್ನು ಕೇಳಿದಾಗ “ಅವರು ಮರೆತಿರಬೇಕು” ಎಂಬ ಉತ್ತರವಷ್ಟೇ ಬಂತು.

ಈ ವಂದೇ ಮಾತರಂ ಸಮಾರಂಭದಲ್ಲಿ ವಿದ್ಯಾರ್ಥಿಗಳು ರಾಷ್ಟ್ರಗೀತೆ ಮತ್ತು ನಾಡಗೀತೆಯನ್ನು ಹಾಡುವ ಕಾರ್ಯಕ್ರಮವಿತ್ತು. ಆದರೆ ವಿದ್ಯಾರ್ಥಿಗಳಿಗೆ ರಾಷ್ಟ್ರಧ್ವಜದ ಮಹತ್ವವನ್ನು ಇಲ್ಲಿ ವಿವರಿಸುವವರು ಯಾರೂ ಇರಲಿಲ್ಲ. ಬಾಲಿವುಡ್ಡಿನ ಖ್ಯಾತ ಆನಂದಜಿ ಮತ್ತವರ ತಂಡದ 300 ಮಂದಿ ಬಾಲಿವುಡ್ಡಿನ ವಿವಿಧ `ದೇಶಭಕ್ತಿ’ಯ ಹಾಡುಗಳನ್ನು ಹಾಡಿ ವಿದ್ಯಾರ್ಥಿಗಳು ಎದ್ದು ನಿಂತು ಕುಣಿಯುವಂತೆ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಬಾಲಕ, ಬಾಲಕಿಯರನ್ನು ಜತೆಯಾಗಿ ನಿಲ್ಲಿಸದೆ ಪ್ರತ್ಯೇಕವಾಗಿ ನಿಲ್ಲಿಸಲಾಗಿತ್ತು. ಪ್ರವೇಶದ್ವಾರದಲ್ಲಿಯೇ ಹುಡುಗರನ್ನು ಗ್ಯಾಲರಿಯಲ್ಲಿ ಕೂರಿಸುವಂತೆ ಹೇಳಲಾಗಿದ್ದರೆ, ಹುಡುಗಿಯರಿಗೆ ಮೈದಾನ ಪ್ರವೇಶಿಸುವಂತೆ ಹೇಳಲಾಗಿತ್ತು. ಕಾರ್ಯಕ್ರಮ ಮುಗಿಯುವ ತನಕ ಯಾರಿಗೂ ಮೈದಾನದಿಂದ ಹೊರಕ್ಕೆ ಹಾಗೂ ಶೌಚಾಲಯಕ್ಕೂ ಹೋಗಲು ಅನುಮತಿಯಿರಲಿಲ್ಲ. ಒಟ್ಟಾರೆಯಾಗಿ ಈ ಕಾರ್ಯಕ್ರಮ ತನ್ನ ಉದ್ದೇಶ ಈಡೇರಿಸುವಲ್ಲಿ ವಿಫಲವಾ ಗಿದೆಯೆಂದು ಹೊರನೋಟಕ್ಕೆ ಸ್ಪಷ್ಟವಾಗಿದ್ದರೂ ಆಯೋಜಕ ಸಂಸ್ಥೆಯಾದ ಹಿಂದೂ ಸ್ಪಿರಿಚುವಲ್ ಎಂಡ್ ಸರ್ವಿಸ್ ಫೇರ್ ಹೇಳಿಕೆ ಯೊಂದನ್ನು ನೀಡಿ,  “ಸಾವಿರಾರು ವಿದ್ಯಾರ್ಥಿ, ವಿದ್ಯಾರ್ಥಿನಿಯರು ವಂದೇ ಮಾತರಂ ಹಾಡಿ ದೇಶಭಕ್ತಿಯ ವಾತಾವರಣ ಸೃಷ್ಟಿಸಿದರು” ಎಂದು ಹೇಳಿದೆ.