ಏರುತ್ತಿರುವ ಬಿಸಿಲ ಧಗೆಯಿಂದ ತಂಪುಪಾನೀಯಗಳಿಗೆ ಬೇಡಿಕೆ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ನಗರದಲ್ಲಿ ಬಿಸಿಲಿನ ತಾಪ ಹೆಚ್ಚಾಗತೊಡಗಿದೆ. ಎಪ್ರಿಲ್-ಮೇ ತಿಂಗಳ ಬಿಸಿಲಿನ ಝಳ ಫೆಬ್ರವರಿಯಲ್ಲೇ ಜನತೆಗೆ ಬಿಸಿ ಮುಟ್ಟಿಸತೊಡಗಿದೆ. ಹೀಗಾಗಿ ಕಡಲೂರ ಕರಾವಳಿ ಬಿಸಿಲೂರಾಗತೊಡಗಿದೆ. ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ತಾಪಮಾನದಿಂದಾಗಿ ಜನ ಸೆಖೆ ಹೆಚ್ಚಾಗತೊಡಗಿದೆ. ಪ್ರಸ್ತುತ ಕರಾವಳಿಯ ಉಷ್ಣಾಂಶ 39 ಡಿಗ್ರಿ ಸೆಲ್ಸಿಯಸ್ ತಲುಪಿದೆ.

ಒಂದೊಮ್ಮೆ ಸಮೃದ್ಧ ಮಳೆಯ ನಾಡಾಗಿ ಗುರುತಿಸಿಕೊಂಡ ಮಂಗಳೂರು ಇದೀಗ ಕಾಂಕ್ರೀಟ್ ಕಾಡಾಗುತ್ತಿದೆ. ಮರಗಳನ್ನು ಕಡಿಯುವುದು ಬಿಟ್ಟರೆ ಗಿಡಗಳನ್ನು ನೆಟ್ಟು ಪೋಷಿಸಲು ಯಾರೂ ಮುಂದಾಗುತ್ತಿಲ್ಲ. ಪರಿಸರ ತಾಪಮಾನದ ಬಗ್ಗೆ ಮಾತನಾಡುವ ಮಂದಿ ಪರಿಸರ ರಕ್ಷಣೆ ಬಗ್ಗೆ ಮಾತನಾಡುತ್ತಿಲ್ಲ. ಎಷ್ಟು ಗಿಡಮರಗಳನ್ನು ನೆಟ್ಟು ಬೆಳೆಸಲಾಗಿದೆ ಎನ್ನುವ ಲೆಕ್ಕವನ್ನೂ ಅರಣ್ಯ ಇಲಾಖೆ ನೀಡುತ್ತಿಲ್ಲ.

ಮಂಗಳೂರಿನಲ್ಲಿ ಮಳೆಯ ಕೊರತೆ ಕಡಿಮೆಯಾಗುತ್ತಿರುವುದು ಕೂಡಾ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿರುವುದಕ್ಕೆ ಕಾರಣವೆನ್ನಲಾಗುತ್ತಿದೆ. ಮಳೆಗಾಳಿ ಬದಲಿಗೆ ಬಿಸಿ ಗಾಳಿ ಜೋರಾಗಿ ಬೀಸುತ್ತಿದೆ. ದಿನದಿಂದ ದಿನಕ್ಕೆ ಉಷ್ಣಾಂಶ ಹೆಚ್ಚಾಗುತ್ತಿದೆ. ಅದರಲ್ಲೂ ಈ ವರ್ಷ ಬಿಸಿಲ ತಾಪ ಮಿತಿಮೀರುತಿದ್ದು, ಸದ್ಯ 39 ಡಿಗ್ರಿ ಸೆಲ್ಸಿಯಸ್ ತಲುಪಿದೆ. ಸಾಮಾನ್ಯವಾಗಿ ಕರಾವಳಿಯಲ್ಲಿ ಮಾರ್ಚ್, ಎಪ್ರಿಲ್ ತಿಂಗಳಲ್ಲಿ ಬಿಸಿಲ ತಾಪ ಏರುತ್ತದೆ. ಆದರೆ ಈ ವರ್ಷ ಫೆಬ್ರವರಿ ತಿಂಗಳಲ್ಲೇ ಬಿಸಿಲ ತಾಪ ಗರಿಷ್ಠ ಮಟ್ಟದಲ್ಲಿ ಏರಿಕೆಯಾಗಿದೆ. ಬಿಸಿಲ ತಾಪಮಾನ ಹೆಚ್ಚಾಗುತ್ತಿರುವುದರಿಂದ ಮನೆಯಿಂದ ಹೊರಬರಲು ಜನ ಹಿಂದೇಟು ಹಾಕುತ್ತಿದ್ದಾರೆ.

ಬಿಸಿಲ ತಾಪ ಕಡಿಮೆ ಮಾಡಲೆಂದು ಮಂಗಳೂರಿನ ಮಂದಿ ತಂಪು ಪಾನೀಯಗಳಿಗೆ ಮೊರೆ ಹೋಗುತ್ತಿದ್ದಾರೆ. ಬಾಯಾರಿಕೆ ತಣಿಸಲು ಜನರು ಎಳನೀರು, ಕಬ್ಬಿನ ಹಾಲು, ಜ್ಯೂಸ್ ಅಲ್ಲದೆ ತಂಪು ಪಾನೀಯಗಳನ್ನು ಕುಡಿಯುತ್ತಿದ್ದಾರೆ. ಈ ವರ್ಷ ಈಚಲು ಹಣ್ಣು(ಇರೋಲ್) ಕೂಡಾ ಬೇಡಿಕೆ ಇದ್ದು, ನಗರದ ಹಲವು ಕಡೆಗಳಲ್ಲಿ ಈರೋಲ್ ವ್ಯಾಪಾರಿಗಳು ಭರ್ಜರಿ ವ್ಯಾಪಾರ ಮಾಡುತ್ತಿದ್ದಾರೆ. ಬೀಚುಗಳಿಗೆ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ.