ತುಳುನಾಡಿನಲ್ಲೇ ಮರಳಿಗೆ ಕೃತಕ ಬರ ಸೃಷ್ಟಿಗೆ ಯಾರ ಕೈವಾಡವಿರಬಹುದು

ಸಾಂದರ್ಭಿಕ ಚಿತ್ರ

ಮರಳು ಉತ್ಪಾದನೆಯಾಗುತ್ತಿರುವ ಕರಾವಳಿ ಜನತೆಯ ಉಪಯೋಗಕ್ಕಿಲ್ಲದ ಮರಳು ನೀತಿಯಿಂದ ಮಳೆಗಾಲಕ್ಕಿಂತ ಮುಂಚೆ ಬಡವರು ಮನೆ ಕಟ್ಟಿದ ಅನುದಾನ ಹಿಂದೆ ಹೋಗುವ ಭೀತಿ ಒಂದೆಡೆಯಾದರೆ ಅನಾದಿ ಕಾಲದಿಂದಲೂ ಇದನ್ನೇ ಕಸುಬಾಗಿಸಿರುವ ಸಾವಿರಾರು ಕುಟುಂಬಗಳು, ಕಾರ್ಮಿಕರು ಬೀದಿಪಾಲಾಗಿದ್ದಾರೆ
ಕರಾವಳಿ ಅಭಿವೃದ್ಧಿ ವಿರೋಧಿ ಹಾಗೂ ಬಡ ಕಾರ್ಮಿಕ ವಿರೋಧಿ ಕಾನೂನಿಗೆ ಸಂವಿಧಾನದಲ್ಲೇ ಮಾನ್ಯತೆ ಇಲ್ಲವೆಂಬುದನ್ನು ಜಿಲ್ಲಾಡಳಿತ ತಿಳಿಯಲಿ. ಬಲಪ್ರಯೋಗದ ಬಲತ್ಕಾರದ, ನಿರ್ಬಂಧದ ಕಾನೂನುಗಳು ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುತ್ತಿದೆ. ಅಧಿಕಾರಿಗಳಿಗೆ, ಇಲಾಖೆಗಳಿಗೆ ನೋಟು ಕಟ್ಟುಗಳ ಪೂರೈಸುವ ಶ್ರೀಮಂತ ಮಾಫಿಯಾಗಳಿಗೊಂದು ನ್ಯಾಯ, ಬಡವರಿಗೊಂದು ನ್ಯಾಯದಿಂದಾಗಿ ನಮ್ಮ ಮರಳು ನಮಗಿಲ್ಲ. ಬೆಂಗಳೂರು, ಕೇರಳ ರಾಜ್ಯಗಳಿಗೆ ನಿತ್ಯ ಹೋಗಲು ಅನುವು ಮಾಡುತ್ತಿರುವ ಜಿಲ್ಲಾಡಳಿತ ಟೆಂಡರ್ ಮೂಲಕ ಮರಳು ಮಾಫಿಯಾಗೆ ಸಹಕಾರ ಕೊಡುವುದು ತುಳುನಾಡಿನ ಜನರನ್ನು ನಿರ್ಗತಿಕರನ್ನಾಗಿ ನಾಶ ಮಾಡುವ ಹುನ್ನಾರವಾಗಿದೆ. ಡೀಸಿ ಮೇಲೆ ದಾಳಿಯ ನಿಜವಾದ ಪ್ರಭಾವಿ ಮಾಫಿಯಾ ನಾಯಕರನ್ನು ಈವರೆಗೆ ಯಾಕೆ ಬಂಧಿಸಿಲ್ಲ
ರಾಜಕಾರಣಿಗಳು ಮತ್ತು ಅಧಿಕಾರಿಗಳು ನಮ್ಮ ತಾಳ್ಮೆಯನ್ನು ಪರೀಕ್ಷಿಸುತ್ತಿರುವ ನಾಟಕ ಮಾಡುತ್ತಿದ್ದು, ನಮ್ಮ ನೋವು ಹೇಳಿಕೊಂಡಾಗ ಸರ್ಕಾರದತ್ತ ಬೆರಳು ತೋರಿಸುತ್ತಾ ನದಿ, ನೀರು, ಮರಳು ವಿದ್ಯುತ್ತನ್ನು ಬೆಂಗಳೂರಿನತ್ತ ಸಾಗಿಸಿ ಪಕ್ಷಪಾತ ಧೋರಣೆಯನ್ನು ಮಾಡುತ್ತಿರುವುದು ಎಷ್ಟು ಸರಿ ? ಅತಿ ಕಡಿಮೆ ಆದಾಯವಿದ್ದೂ ಹಿಂದುಳಿದ ಬಿಹಾರ ರಾಜ್ಯವು ಸಾಮಾಜಿಕ ಪಿಡುಗಿನ ಮದ್ಯಪಾನ ನಿಷೇಧ ಮಾಡಿದೆ. ಆದರೆ ಕರ್ನಾಟಕ ಸರಕಾರವು ಮರಳು, ಕಂಬಳಗಳನ್ನು ಮಾತ್ರ ನಿಷೇಧಿಸಿ ಪ್ರಾಚೀನ ಕಸುಬು, ಪರಂಪರೆಯನ್ನೇ ನಾಶ ಮಾಡಲು ಹೊರಟಿದೆ. ಸುಪ್ರೀಂ ಕೋರ್ಟ್ ಆದೇಶದಂತೆ ಹೆದ್ದಾರಿ ಬದಿಯ ಮದ್ಯದಂಗಡಿಯನ್ನು ಮುಚ್ಚುವ ಬದಲು ಅವುಗಳನ್ನು ಉಳಿಸಲು ಅದೆಷ್ಟು ತುರ್ತಾಗಿ ಸಂಪುಟ ಸಭೆ ನಡೆಸಿ ಹೆಣಗಾಡುತ್ತಿದ್ದೀರಿ
ಕರಾವಳಿ ಪ್ರದೇಶದ ಕಿಂಚಿತ್ತೂ ಜ್ಞಾನವಿಲ್ಲದ ಮಂದಿಯಿಂದ ಕಾನೂನುಗಳನ್ನು ರೂಪಿಸಲಾಗುತ್ತಿದೆ. ಅರೆ-ಬರೆ ಕಾಮಗಾರಿಯೊಂದಿಗೆ ಟೋಲ್ ಹೆಸರಲ್ಲಿ ದರೋಡೆ ಪ್ರಾರಂಭವಾಗಿದೆ. ಹೊರ ರಾಜ್ಯದ ಮಾಫಿಯಾದವರಿಂದ ಮರಳಿನ ಕಾಳದಂಧೆ ನಿರಂತರವಾಗಿ ನಡೆಯುತ್ತಿದೆ. ಸಾಂಪ್ರದಾಯಿಕವಾಗಿ ಹೊಳೆಗಳಿಂದ ಮರಳು ತೆಗೆಯುವುದರಿಂದ ನೀರಿನ ಹರಿವು ಹೆಚ್ಚಾಗುತ್ತದೆಂಬ ಸಾಮಾನ್ಯ ಜ್ಞಾನವಿದ್ದರೂ ಅಧಿಕಾರಿಗಳು ಮತ್ತು ರಾಜಕಾರಣಿಗಳು ಜೊತೆಯಾಗಿ ಕಳ್ಳ ಸಾಗಾಣಿಕೆ ಮೂಲಕ ಭ್ರಷ್ಟಾಚಾರಕ್ಕಾಗಿ ಮರಳು ಸಿಗುವ ತುಳುನಾಡಿನಲ್ಲೇ ಮರಳಿಗೆ ಕೃತಕ ಬರವನ್ನು ಸೃಷ್ಟಿಸಿರುತ್ತಾರೆ. ಕೋರ್ಟ್ ಆದೇಶವೆನ್ನುವ ನೀವು ಲಂಚ ಪಡೆಯುವುದು ಅಪರಾಧ ಹೆದ್ದಾರಿ ಬದಿಯ ಮದ್ಯದಂಗಡಿಗಳನ್ನು ಮುಚ್ಚಬೇಕು. ಅಂದರೂ ನೀವು ಇಂತಹ ಆದೇಶಗಳಿಗೆ ಎಷ್ಟು ಮನ್ನಣೆ ನೀಡುತ್ತೀರಾ  ಎತ್ತಿನಹೊಳೆ ಯೋಜನೆಗೆ ಕೋರ್ಟ್ ತಡೆಯಾಜ್ಞೆ ಇದ್ದರೂ ಕಾಮಗಾರಿಗಳು ನಡೆಯುತ್ತಿಲ್ಲವೇ  ಅದನ್ನು ಉಳಿಸಲು ಅದೆಷ್ಟು ಸಂಪುಟ ಸಭೆ ನಡೆಸುತ್ತೀರಾ
ನ್ಯಾಯಾಲಯದ ಹಾಗೂ ಇನ್ನಿತರ ಸಬೂಬುಗಳನ್ನು ನೀಡಿ ಜನಸಾಮಾನ್ಯರಿಗೆ  ಬಡಕಾರ್ಮಿಕರಿಗೆ ಕಾನೂನು ನೀತಿ ನಿಯಮಗಳ ಹೆಸರಿನಲ್ಲಿ ತೊಂದರೆ ಮಾಡುವಂತಿದ್ದರೆ ಮುಂದಿನ ದಿನಗಳಲ್ಲಿ ಬಹಿರಂಗವಾಗಿ ಮರಳು ತೆಗೆಯುವ ಸತ್ಯಾಗ್ರಹವನ್ನು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಂಟಿಯಾಗಿ ಮಾಡದೇ ಬೇರೆ ವಿಧಿಯೇ ಇಲ್ಲ ಎಂಬುದನ್ನು ಕೂಡಾ ಸಂಬಂಧಿಕರ ಗಮನಕ್ಕೆ ತರಬಯಸುತ್ತೇವೆ ಹಾಗೂ ಈ ಮೂಲಕ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ಅವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಿದ್ದೇವೆ

  • ಚಿತ್ತರಂಜನದಾಸ್ ಶೆಟ್ಟಿ   ಉಡುಪಿ