ಕೃತಕ ನೆರೆಯಿಂದ ವೃದ್ಧೆಗೆ ಗೃಹಬಂಧನ

ನಮ್ಮ ಪ್ರತಿನಿಧಿ ವರದಿ

ಪಡುಬಿದ್ರಿ : ಕಳೆದ ಕೆಲ ದಿನಗಳಿಂದ ನಿರಂತರವಾಗಿ ಸುರಿಯುತ್ತಿದ ಮಳೆ ಸಹಿತ ಮಳೆನೀರು ಹರಿದು ಹೋಗಲು ಚರಂಡಿಯೇ ಇಲ್ಲದ ಕಾರಣ, ಪಡುಬಿದ್ರಿಯ ಗುಡ್ಡೆಚ್ಚಿಯ ಒಂದು ಪ್ರದೇಶ ದ್ವೀಪವಾಗಿ ರೂಪುಗೊಂಡಿದ್ದಲ್ಲದೆ, ವಯೋವೃದ್ಧೆಯೊಬ್ಬರು ಕಳೆದ ಮೂರು ದಿನಗಳಿಂದ ಗೃಹಬಂಧನದಲ್ಲಿದ್ದಾರೆ.

ಗುಡ್ಡೆಚ್ಚಿಯ ಜಾನಕಿಯಮ್ಮ ಎಂಬವರು ಬಹಳಷ್ಟು ವರ್ಷಗಳಿಂದ ಈ ಭಾಗದಲ್ಲಿ ಮನೆಕಟ್ಟಿ ವಾಸವಾಗಿದ್ದು, ಈ ಪ್ರದೇಶದ ನೀರು ಪಕ್ಕದ ಗದ್ದೆಯಾಗಿ ಹರಿದು ಹೋಗುತ್ತಿತ್ತು. ಇದೀಗ ಆ ಗದ್ದೆಯನ್ನು ಅದರ ಯಜಮಾನ ಮಾರಾಟ ಮಾಡಿದ್ದರಿಂದ, ಅದನ್ನು ಪಡೆದ ವ್ಯಕ್ತಿಗಳು ಆ ಗದ್ದೆಯನ್ನು ಎತ್ತರಗೊಳಿಸುವುದಕ್ಕಾಗಿ ಮಣ್ಣು ತುಂಬಿಸಿದ್ದರು. “ಮಳೆನೀರು ಹರಿಯುವ ಸಮಸ್ಯೆಯ ಬಗ್ಗೆ ಮಣ್ಣು ತುಂಬಿಸುವ ಸಂದರ್ಭ ಸ್ಥಳದ ಯಜಮಾನರಿಗೆ ಸ್ಥಳೀಯರಾದ ನಾವು ಹೇಳಿದಾಗ ಅದಕ್ಕೆ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದ್ದರಾದರೂ ಇದೀಗ ಅದಕ್ಕೆ ವಿರುದ್ಧವಾಗಿ ಮಾತನಾಡುತ್ತಿದ್ದರಿಂದ, ಸಮಸ್ಯೆ ಉಲ್ಭಣಗೊಂಡು ನಮ್ಮ ಮನೆಯೊಳಗೆ ನೀರು ಹೊಕ್ಕಿದ್ದು, ಬಾಗಿಲು ತೆರೆಯದ ಸ್ಥಿತಿ ಮುಂದುವರಿದ್ದರಿಂದ ವಯೋವೃದ್ಧೆ ಕಳೆದ ಮೂರು ದಿನಗಳಿಂದ ಹೊರ ಪ್ರಪಂಚವನ್ನು ನೋಡದಂತಾಗಿದೆ” ಎಂದು ಸ್ಥಳೀಯ ಗಣೇಶ್ ಭಟ್ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.

ಪಿಡಿಒ ಸಹಿತ ಅಧ್ಯಕ್ಷರು ಸ್ಥಳಕ್ಕೆ ಬಂದು ಸಮಸ್ಯೆಯನ್ನು ಪರಿಹಾರ ಮಾಡಲು ಎರಡೂ ಕಡೆಯವರಿಗೂ ಸೂಚಿಸಿದಾಗ ಒಪ್ಪಿದರಾದರೂ, ಅವರು ಮರಳಿದ ಬಳಿಕ ನೀರು ಹರಿದು ಹೋಗಲು ಚರಂಡಿ ನಿರ್ಮಿಸಲು ಮುಂದಾದಾಗ ಅದಕ್ಕೆ ಸ್ಥಳದ ಮಾಲಿಕ ವಿರೋಧಿಸಿದ್ದರಿಂದ ಸಮಸ್ಯೆ ಜೀವಂತವಾಗಿ ಉಳಿದಂತಾಗಿದೆ. ಮುಂದೆ ಮಳೆ ತೀವ್ರಗೊಂಡರೆ ಮತ್ತೆ ಸಮಸ್ಯೆ ದ್ವಿಗುಣವಾಗಲಿದ್ದು, ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಸಹಿತ ರಾಜಕಾರಣಿಗಳು ಕಾರ್ಯಾಚರಿಸಿ ಇತ್ಯರ್ಥಗೊಳಿಸಲಿ ಎನ್ನುತ್ತಾರೆ ಸಮಸ್ಯೆ ಅನುಭವಿಸುತ್ತಿರುವ ಮನೆಯೊಡತಿ ಜಾನಕಿಯಮ್ಮ .