ಸೊಸೈಟಿ ಗ್ರಾಹಕರಿಂದ ಹಣಕ್ಕಾಗಿ ಪರದಾಟ

ಗ್ರಾಮೀಣ ಪ್ರದೇಶದಲ್ಲಿ ಪ್ರಾಥಮಿಕ ಕೃಷಿ ಷತ್ತಿನ ಸಹಕಾರಿ ಸಂಘಗಳು ಸದ್ಗುಗದ್ದಲವಿಲ್ಲದೆ ಕೃಷಿಕರ ಜನಸಾಮಾನ್ಯರ ಪಾಲಿಗೆ ಬ್ಯಾಂಕುಗಳಂತೆ ಕೆಲಸ ನಿರ್ವಹಿಸುತ್ತಿವೆ. ಕೃಷಿಕರ ಕೃಷಿ, ಉತ್ಪನ್ನಗಳ ಹಣ, ಹಾಲಿನ ಹಣ ಮುಂತಾದ ಚಿಕ್ಕಪುಟ್ಟ ಉಳಿತಾಯಗಳನ್ನು ಶೇಖರಿಸಿ ರೈತರು ತಮಗೆ ಅಗತ್ಯ ಬಿದ್ದಾಗ ನಗದೀಕರಿಸುತ್ತಾ ವ್ಯವಹರಿಸುತ್ತಿದ್ದಾರೆ. ರೈತರು ಅನಾರೋಗ್ಯಕ್ಕೋ ಮದುವೆ ಸಮಾರಂಭಕ್ಕೋ ತಾವು ಕೂಡಿಟ್ಟ ಸಣ್ಣ ಪುಟ್ಟ ಮೌಲ್ಯವನ್ನು ಅದು ಸಾಕಾಗದಿದ್ದಾಗ ತಮ್ಮ ಒಡವೆಗಳನ್ನು ಅಲ್ಲಿ ಕೂಡಿಟ್ಟು ವ್ಯವಹರಿಸುತ್ತಾ ಬಂದಿದ್ದಾರೆ. ಅವಿಭಜಿತ ದ ಕ ಜಿಲ್ಲೆಯಲ್ಲಿ ಸುಮಾರು 170 ರೈತರ ಸಹಕಾರಿ ಸಂಘಗಳಿದ್ದು ಗ್ರಾಮೀಣ ಜನರ ಪಾಲಿಗೆ ತನ್ನದೇ ಆದ ಕೊಡುಗೆ ನೀಡುತ್ತಾ ಬಂದಿದೆ. ಅವು  ರೈತರಿಂದ ಜಮಾ ಬಂದ ಹಣವನ್ನು ಡಿಸಿಸಿ ಬ್ಯಾಂಕ್‍ಗಳಲ್ಲಿ ರಾಷ್ಟ್ರೀಕೃತ ಬ್ಯಾಂಕ್‍ಗಳ ಉಳಿತಾಯ ಖಾತೆಗಳಲ್ಲಿ ಇಟ್ಟು ಬೇಕೆಂದಾಗ ತಂದು ರೈತರಿಗೆ ನೀಡುತ್ತಾ ಬಂದಿವೆ.

ರೂಪಾಯಿ 500, 1000 ಮುಖಬೆಲೆಯ ನೋಟುಗಳ ಚಲಾವಣೆ ಸ್ಥಗಿತವಾದಂದಿನಿಂದ ಬ್ಯಾಂಕುಗಳು ಸಹಕಾರಿ ಸಂಘಗಳಿಗೆ ತಮ್ಮ ಖಾತೆಯಲ್ಲಿರುವ ಹಣವನ್ನು ವಾರಕ್ಕೆ ರೂಪಾಯಿ 24,000 ಸಾವಿರದಂತೆ ನೀಡುತ್ತಿರುವುದರಿಂದ ಸೊಸೈಟಿಗಳ ಹಾಗೂ ಗ್ರಾಹಕರ ವ್ಯವಹಾರ  ಸ್ತಬ್ದವಾಗಿದೆ. ಇದರಿಂದ ಸೊಸೈಟಿಗಳನ್ನೇ ನೆಚ್ಚಿಕೊಂಡ ಅದೆಷ್ಟೋ ಗ್ರಾಹಕರು ಹಣಕ್ಕಾಗಿ ಒದ್ದಾಡುವ ಸ್ಥಿತಿ ಉಂಟಾಗಿದೆ.

ರಿಸರ್ವ್ ಬ್ಯಾಂಕ್ ಕೂಡಲೇ ಕ್ರಮ ಕೈಗೊಂಡು ಡಿಸಿಸಿ ಬ್ಯಾಂಕುಗಳ ಮೂಲಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಗರಿಷ್ಠ ಪ್ರಮಾಣದ ಹಣ ಬಿಡುಗಡೆ ಮಾಡಿ ಗ್ರಾಮೀಣ ಜನರ ಬದುಕಿಗೆ ಆಸರೆಯಾಗಿ ನಿಲ್ಲಬೇಕಿದೆ. ಇಲ್ಲವಾದರೆ ನಮ್ಮ ಜಿಲ್ಲೆಯಲ್ಲೂ ಗ್ರಾಮಾಂತರ ಪ್ರದೇಶಗಳಲ್ಲಿ ಹಣಕ್ಕಾಗಿ ಹಾಹಾಕಾರ ಉಂಟಾಗಿ ಆತ್ಮಹತ್ಯೆಗಳಂತಹ ಪ್ರಕರಣಗಳಾದರೆ ಅಚ್ಚರಿಯಿಲ್ಲ. ಸರಕಾರ ಕೂಡಲೇ ಎಚ್ಚೆತ್ತು ಕಾರ್ಯಪ್ರವೃತ್ತವಾಗಬೇಕಿದೆ.

  • ನಾರಾಯಣ ಫಡ್ಕೆ, ಮುಂಡಾಜೆ