ಬಡವರಿಗೆ ತೊಡಕಾದ ನೋಟು ರದ್ಧತಿ

ನೋಟು ನಿಷೇಧದಿಂದ ಶ್ರೀಮಂತರಿಗೆ ಅನಾನುಕೂಲವಾಯಿತು ಎನ್ನುವುದಕ್ಕಿಂತ ಹೆಚ್ಚಾಗಿ ಜನಸಾಮಾನ್ಯರ ಕುಟುಂಬಗಳಿಗೆ ಹೆಚ್ಚು ತೊಂದರೆ ಮತ್ತು ಗೊಂದಲವಾಗಿರುವುದು ಎದ್ದು ಕಾಣುತ್ತದೆ.

1000 ಮತ್ತು 500 ರೂಪಾಯಿ ಮುಖಬೆಲೆಯ ನೋಟುಗಳನ್ನು ನಿಷೇಧಿಸಿರುವುದು ಇಡೀ ದೇಶವನ್ನೇ ತಲ್ಲಣಗೊಳಿಸಿ ಆತಂಕ ಸೃಷ್ಟಿಸಿದೆ.ದೇಶದ ಪ್ರಜೆಗಳನ್ನು ನಿಯಂತ್ರಣಗೊಳಿಸುವ ಶಕ್ತಿಯೊಂದು ಅಗೋಚರವಾಗಿದ್ದುಕೊಂಡು ನಮ್ಮನ್ನು ಆಳುತ್ತಿದೆ ಎಂಬುದು ಎಷ್ಟೋ ಜನರ ಅನುಭವಕ್ಕೆ ಬಂದಿರಲಾರದು. ಆದರೆ ಅಂಥವರಿಗೆ ಈಗ ಅದು ಮನದಟ್ಟಾಗಿದೆ. ಕೇಂದ್ರ ಸರಕಾರದ ಈ ನಿರ್ಧಾರಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಈ ಕಾರ್ಯವೈಖರಿಯ ಬಗ್ಗೆ ಕೆಲವರು ಹೊಗಳಿದರೆ ಮತ್ತೆ ಕೆಲವು ತೆಗಳಿದ್ದಾರೆ.

ನೋಟು ನಿಷೇಧಿಸಿದ್ದೇನೋ ಸರಿ. ಆದರೆ, ಸಮರ್ಪಕವಾಗಿ ಹೊಸ ನೋಟುಗಳನ್ನು ಸಿದ್ಧಪಡಿಸಿಕೊಂಡು ಸಂಬಂಧಪಟ್ಟ ಬ್ಯಾಂಕುಗಳಿಗೆ ಆದಷ್ಟು ಶೀಘ್ರದಲ್ಲಿ ಸರಬರಾಜು ಮಾಡಿ ಜನಗಳಿಗೆ ತೊಂದರೆಯಾಗದಂತೆ ಪೂರ್ವ ಸಿದ್ಧತೆ ಮಾಡಿಕೊಂಡಿದ್ದರೆ ಅದು ಸರಿಯಾದ ಕ್ರಮವಾಗುತ್ತಿತ್ತು ಎಂಬುದು ಕೆಲವರ ಅಭಿಪ್ರಾಯ.

ವಿದೇಶದ ಸ್ವಿಸ್ ಬ್ಯಾಂಕಿನಲ್ಲಿರುವ ಕಪ್ಪು ಹಣವನ್ನು ತರುತ್ತೇನೆಂದು ಮೋದಿಉವರು ಆಶ್ವಾಸನೆ ನೀಡಿದ್ದರು. ಆದರೆ ಅದನ್ನು ತರುವ ಪ್ರಯತ್ನವನ್ನು ಮಾಡದೇ ಈ ರೀತಿ ಅಧಿಕ ಮುಖಬೆಲೆಯ ನೋಟುಗಳನ್ನು ರದ್ದು ಮಾಡಿರುವುದು ಎಷ್ಟರಮಟ್ಟಿಗೆ ಸರಿ ? ನಿಜವಾಗಿಯೂ ಇದರಿಂದ ಭ್ರಷ್ಟರನ್ನು ನಿಯಂತ್ರಿಸಲು ಸಾಧ್ಯವೇ ? ಸಾಮಾನ್ಯ ಜನರಿಗೆ ಇದರಿಂದ ಯಾವ ರೀತಿ ಉಪಯೋಗವಾಗಬಲ್ಲದು ಎಂಬ ಮಾತುಗಳು ಜನಸಾಮಾನ್ಯರಿಂದ ಕೇಳಿ ಬರುತ್ತಿದೆ.

ಒಟ್ಟಿನಲ್ಲಿ ಈ ದೇಶದ ಕೋಟ್ಯಧಿಪತಿಗಳು ಎಷ್ಟರಮಟ್ಟಿಗೆ ಇದರಿಂದ ತೊಂದರೆಗೊಳಗಾಗಿ ಆತಂಕಕ್ಕೆಟ ಸಿಲುಕಿ ತಮ್ಮ ಕಪ್ಪು ಹಣವನ್ನು ರಕ್ಷಿಸಿಕೊಳ್ಳಬಹುದು ? ನಿಜವಾಗಿಯೂ ಅವರ ಮೇಲೆ ಇದು ಪರಿಣಾಮ ಬೀರಿದೆಯೇ ? ಅಥವಾ ಅವರ ಸಂಪಾದನೆಯ ಹಣ ಬಹುಪಾಲು ಅವರ ಸ್ಥಿರಾಸ್ತಿಯಾಗಿ ಬೇರೆ ಬೇರೆ ರೂಪದಲ್ಲಿ ಕ್ಷೇಮವಾಗಿದ್ದು ಬಿಟ್ಟು ಈ ಪ್ರಕರಣದಿಂದ ಯಾವುದೇ ರೀತಿ ಪರಿಣಾಮ ಬೀರದೆ ಎಷ್ಟೋ ಶ್ರೀಮಂತರು ಇದರಿಂದ ಸುರಕ್ಷಿತವಾಗಿ ನೆಮ್ಮದಿಯಾಗಿರಲೂಬಹುದು.

ಒಟ್ಟಿನಲ್ಲಿ ನೋಟು ರದ್ದಿನಿಂದ ಶ್ರೀಮಂತರಿಗೆ ತಟ್ಟಿರುವ ಬಿಸಿಗಿಂತ, ಮೇಲು ನೋಟಕ್ಕೆ ಬಡವರಿಗೆ, ಜನಸಾಮಾನ್ಯರಿಗೆ ಅಮಾಯಕರಿಗೆ ಆಗಿರುವ ಅನಾಹುತವೇ ಹೆಚ್ಚು.

  • ಎಂ ರಾಜು ಮಂಡನ್, ಬ್ರಹ್ಮಾವರ