ಎನ್ಡಿಎ ಸರಕಾರಕ್ಕೆ ತುರ್ತು ಸ್ಥಿತಿ ಮರಳಿದಂತಿದೆ

ನೋಟು ಅಮಾನ್ಯ ಎಫೆಕ್ಟ್

ಇಂದಿರಾ ಗಾಂಧಿಯವರು ಎಮೆರ್ಜನ್ಸಿ ನಂತರ ನಡೆಸಿದ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣದ ರಾಜ್ಯಗಳಾದ ಕರ್ನಾಟಕ, ಆಂಧ್ರ ಮತ್ತು ಮಹಾರಾಷ್ಟ್ರಗಳಲ್ಲಿ ಕಾಂಗ್ರೆಸ್ ಮತ್ತೆ ಜಯಭೇರಿ ಬಾರಿಸಿತು – ಅಂದರೆ ದಕ್ಷಿಣದ ಜನರು ಇಂದಿರಾ ಗಾಂಧಿಯವರ ತುರ್ತು ಪರಿಸ್ಥಿತಿ ಹೇರಿಕೆಯಿಂದ ಅಸಮಾಧಾನಗೊಂಡಿರಲಿಲ್ಲ ಎಂಬುದು ನಿಜವಾಗಿತ್ತು.  ಆದರೆ ಉತ್ತರ ಭಾರತದಲ್ಲಿ ಆಗಿನ ಪರಿಸ್ಥಿತಿ ಇದಕ್ಕೆ ವ್ಯತಿರಿಕ್ತವಾಗಿತ್ತು. ಉತ್ತರದ ಜನರು ರಾಜಕೀಯ ವಿಷಯದಲ್ಲಿ ಹೆಚ್ಚು ಭಾವನಾತ್ಮಕ ರೀತಿಯಲ್ಲಿ ವರ್ತಿಸುತ್ತಾರೆ ಎಂಬುದು ಆಗ ಸಾಬೀತಾಗಿತ್ತು. ಹಾಗಾಗಿಯೇ ಸ್ವತಃ ಇಂದಿರಾ ಗಾಂಧಿ ಮತ್ತು ಸಂಜಯ ಗಾಂಧಿ ಇಬ್ಬರ ಸಹಿತ ಆಗ ಕಾಂಗ್ರೆಸ್ ಉತ್ತರದಲ್ಲಿ ಹೀನಾಯವಾಗಿ ಸೋತಿತ್ತು.

ಈಗಿನ ಮೋದಿಯವರ ನೋಟು ನಿಷೇಧದಿಂದಾದ ಸ್ಥಿತಿ ತುರ್ತುಪರಿಸ್ಥಿತಿಯಂತೆಯೇ ಇದೆ. ಅಂದರೆ ನೋಟು ನಿಷೇಧದಿಂದ ದಕ್ಷಿಣ ಭಾರತದಲ್ಲಿ ಅಪಾರ ಕಷ್ಟನಷ್ಟಗಳ ಹೊರತಾಗಿಯೂ ಜನರು ರಾಜಕೀಯವಾಗಿ ಅಷ್ಟು ಆಕ್ರೋಶಗೊಂಡಿಲ್ಲ. ಆದರೆ ಹಿಂದಿ ಪತ್ರಿಕೆಗಳಲ್ಲಿ ಬರುತ್ತಿರುವ ಸುದ್ದಿ ಹಾಗೂ ನಿಷ್ಪಕ್ಷ ಹಿಂದಿ ಟೀವಿ ಚಾನೆಲ್ಲುಗಳಲ್ಲೂ ತೋರಿಸುತ್ತಿರುವ ಜನರ ಬವಣೆಯಿಂದಾಗಿ ಉತ್ತರ ಭಾರತದ ಜನರಲ್ಲಿ ನೋಟು ನಿಷೇಧ ರಾಜಕೀಯವಾಗಿ ಬಹಳ ಆಕ್ರೋಶ ಹುಟ್ಟಿಸಿದೆ. ಒಂದು ವೇಳೆ ಈಗ ತಕ್ಷಣ ಚುನಾವಣೆ ನಡೆದರೆ 1978 ರ ಚುನಾವಣೆಯಲ್ಲಿ ಇಂದಿರಾ ಗಾಂಧಿಯವರಿಗೆ ಆದ ದುರ್ಗತಿಯೇ ಈಗ ಮೋದಿಯವರಿಗೆ ಆಗುವುದರಲ್ಲಿ ಸಂದೇಹವಿಲ್ಲ. ಕೇವಲ ವಿದ್ಯಾವಂತ ನಗರವಾಸಿ ಜನರು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳನ್ನೇ ಎಲ್ಲಾ ಸಾಮಾನ್ಯ ಜನರ ನೈಜ ಅಭಿಪ್ರಾಯ ಎಂದು ತಿಳಿಯುವುದು ತಪ್ಪು.

ಕಳೆದ 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸಾಮಾಜಿಕ ಜಾಲತಾಣಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಉಪಯೋಗಿಸಿ ಜನರಲ್ಲಿ ಕಾಂಗ್ರೆಸ್ ವಿರೋಧಿ ಅಭಿಪ್ರಾಯ ರೂಪಿಸುವಲ್ಲಿ ಸಫಲವಾಗಿದ್ದು ನಿಜ. ಆದರೆ ಈಗ ಎಲ್ಲಾ ಪಕ್ಷಗಳ ಪ್ರಚಾರ ವಿಭಾಗದವರೂ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದು ಆ ಮೂಲಕ ಇತರ ರಾಜಕೀಯ ಪಕ್ಷಗಳೂ ಜನರಲ್ಲಿ ಅಭಿಪ್ರಾಯ ರೂಪಿಸುವಲ್ಲಿ ಶ್ರಮಿಸುತ್ತಿರುವುದು ಅಷ್ಟೇ ಸತ್ಯ.  ಹಾಗಾಗಿ ಈಗ ಉತ್ತರ ಭಾರತದಲ್ಲಿ ನೋಟು ನಿಷೇಧದ ಬಗ್ಗೆ ಸಾಮಾನ್ಯ ಜನರಲ್ಲಿ ಎದ್ದಿರುವ ಆಕ್ರೋಶವನ್ನು ಬಿಜೆಪಿ ಹಗುರವಾಗಿ ತೆಗೆದುಕೊಂಡು ಮಾತು ಮಾತಿಗೆ ದೇಶದ ಯೋಧರನ್ನು ತಮ್ಮ ಲೇಖನಗಳಲ್ಲಿ ಎಳೆದು ತಂದು ದೇಶಭಕ್ತಿಯ ಹೆಸರಲ್ಲಿ ಜನರನ್ನು ಹೆಚ್ಚು ದಿನ ಮೂರ್ಖರನ್ನಾಗಿ ಮಾಡುವುದು ಸಾಧ್ಯವಾಗಲಾರದೇನೋ.

ನಿನ್ನೆ ಸರಕಾರಿ ದೂರದರ್ಶನ ಚಾನೆಲ್ಲಿನ ಒಬ್ಬ ಪತ್ರಕರ್ತನೇ ಮೋದಿಯವರು ನವಂಬರ್ ಎಂಟರಂದು ರಾತ್ರಿ ಎಂಟು ಗಂಟೆಗೆ ನೋಟು ನಿಷೇಧ ಘೋಷಣೆ ಮಾಡಿದ ಕಾರ್ಯಕ್ರಮವನ್ನು ಸರಕಾರ ಲೈವ್ ಎಂದು ಘೋಷಿದ್ದರೂ – ಮೂಲತಃ ಅದು ಲೈವ್ ಆಗಿರದೇ ಹಲವಾರು ಗಂಟೆ ಮೊದಲೇ ಅದನ್ನು ರಿಕಾರ್ಡ್ ಮಾಡಿ ಇಡಲಾಗಿತ್ತು – ನೋಟು ನಿಷೇಧ ಆಳುವ ಪಕ್ಷದ ಎಲ್ಲರಿಗೂ ಹಲವು ಗಂಟೆಗಳ ಮೊದಲೇ ಗೊತ್ತಿತ್ತು ಎಂದು ಸಾಬೀತಾಗಿದೆ. ಇದು ಪ್ರಧಾನ ಮಂತ್ರಿ ಪದದ ಗೌಪ್ಯತೆಯ ಪ್ರಮಾಣ ವಚನದ ಉಲ್ಲಂಘನೆಯಾಗಿದ್ದು ಇದು ಮೋದಿಯವರಿಗೆ ಎಷ್ಟು ಕುತ್ತು ತರುತ್ತದೆ ಎಂದು ಇನ್ನು ಕೆಲವೇ ತಿಂಗಳಲ್ಲಿ ನಡೆಯಲಿರುವ ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆಯೇ ಹೇಳಬಲ್ಲದು.

 

  • ಡಿ ಅನಿಲ್ ಕುಮಾರ್ ಪೂಜಾರಿ

    ಅಳಕೆ,   ಮಂಗಳೂರ