ಬಂಧಿತ 52 ಐಎಸ್ ಉಗ್ರರಲ್ಲಿ ಮತಾಂತರಗೊಂಡ ಹಿಂದೂ, ಕ್ರೈಸ್ತರೂ ಸೇರಿದ್ದಾರೆ : ಎನ್ನೈಎ

ನವದೆಹಲಿ : ರಾಷ್ಟೀಯ ತನಿಖಾ ದಳವು ಇಲ್ಲಿಯ ತನಕ ಬಂಧಿಸಿರುವ ಒಟ್ಟು 52 ಮಂದಿ ಇಸ್ಲಾಮಿಕ್ ಸ್ಟೇಟ್ ಉಗ್ರರಲ್ಲಿ ಮುಸ್ಲಿಮರ ಹೊರತಾಗಿ ಇಸ್ಲಾಮ್ ಧರ್ಮಕ್ಕೆ ಮತಾಂತರಗೊಂಡ ಹಿಂದೂಗಳು ಹಾಗೂ ಕ್ರೈಸ್ತರೂ ಸೇರಿದ್ದಾರೆ. ಅವರಲ್ಲಿ ಹಲವು ಮಂದಿ ಇಂಜಿನಿಯರರು ಹಾಗೂ ಸ್ನಾತ್ತಕೋತ್ತರ ಪದವೀಧರರೂ ಇದ್ದಾರೆ ಎಂದು ಏಜನ್ಸಿ ಮಾಹಿತಿ ನೀಡಿದೆ.

ಆರೋಪಿಗಳಲ್ಲಿ ಶೇ 80 ಮಂದಿ  ಔಪಚಾರಿಕ ಶಿಕ್ಷಣ ಪಡೆದಿದ್ದರೆ ಉಳಿದವರು ಮದರಸಾ ಶಿಕ್ಷಣ ಪಡೆದಿದ್ದಾರೆ. ಎಲ್ಲಾ ಆರೋಪಿಗಳನ್ನೂ ಕಳೆದ ವರ್ಷ ಏಜನ್ಸಿ ದಾಖಲಿಸಿದ 12 ಪ್ರಕರಣಗಳ ಸಂಬಂಧ ಬಂಧಿಸಲಾಗಿದೆ. ರಾಷ್ಟ್ರೀಯ ತನಿಖಾ ಏಜನ್ಸಿ ರಚನೆಯಾದಂದಿನಿಂದ ವರ್ಷವೊಂದರಲ್ಲಿ ಇಷ್ಟೊಂದು ಸಂಖ್ಯೆಯ ಪ್ರಕರಣಗಳನ್ನು ದಾಖಲಿಸಿರುವುದು ಇದೇ  ಪ್ರಥವಮ ಎಂದೂ ಏಜನ್ಸಿ ಮಾಹಿತಿ ನೀಡಿದೆ. ಬಂಧಿತರಲ್ಲಿ 28 ಮಂದಿ 18ರಿಂದ 25ರ ಹರೆಯದವರಾಗಿದ್ದರೆ,  20 ಮಂದಿ 25ರಿಂದ 40 ವರ್ಷ ವಯಸ್ಸಿನವರಾಗಿದ್ದಾರೆ. ಉಳಿದ ನಾಲ್ಕು ಮಂದಿ 40 ವರ್ಷಕ್ಕೆ ಮೇಲ್ಪಟ್ಟವರಾಗಿದ್ದಾರೆ.

ಬಂಧಿತರಲ್ಲಿ 20 ಮಂದಿ ಪದವೀಧರರು ಅಥವಾ ಇಂಜಿನಿಯರುಗಳಾಗಿದ್ದರೆ, 13 ಮಂದಿ ಮೆಟ್ರಿಕ್ ಪಾಸಾದವರು. ಹನ್ನೆರಡು ಮಂದಿ ಇತರರು ಡಿಪ್ಲೋಮಾ ಹೊಂದಿದ್ದರೆ, ಉಳಿದವರು  ಆಟ್ರ್ಸ್ ಅಥವಾ ಕಂಪ್ಯೂಟರ್ ಅಪ್ಲಿಕೇಶನ್ಸ್ ವಿಷಯದಲ್ಲಿ ಸ್ನಾತ್ತಕೋತ್ತರ ಪದವೀಧರರಾಗಿದ್ದಾರೆ ಎಂದು ರಾಷ್ಟ್ರೀಯ ತನಿಖಾ ಏಜನ್ಸಿ ಮಾಹಿತಿ ಬಿಡುಗಡೆಗೊಳಿಸಿದೆ.

ಬಂಧಿತರಲ್ಲಿ ಶೇ 85 ಮಂದಿ ಸುನ್ನಿ ಮುಸ್ಲಿಮರಾಗಿದ್ದರೆ ಉಳಿದವರು ಹಿಂದೂ ಹಾಗೂ ಕ್ರೈಸ್ತ ಧರ್ಮದಿಂದ ಮತಾಂತರಗೊಂಡವರು ಎಂದೂ ಏಜನ್ಸಿ ತಿಳಿಸಿದೆ.

ಬಂಧಿತರಲ್ಲಿ ಅತ್ಯಧಿಕ 12 ಮಂದಿ ಮಹಾರಾಷ್ಟ್ರದವರಾದರೆ, 11 ಮಂದಿ ಕೇರಳದವರಾಗಿದ್ದಾರೆ. ಉಳಿದಂತೆ 10 ಮಂದಿ ತೆಲಂಗಣಾ, ಪಶ್ಚಿಮ ಬಂಗಾಳದಿಂದ ಐದು ಮಂದಿ, ಉತ್ತರಪ್ರದೇಶದಿಂದ ನಾಲ್ಕು, ತಮಿಳುನಾಡಿನಿಂದ ಮೂರು, ರಾಜಸ್ಥಾನದಿಂದ ಇಬ್ಬರು ಹಾಗೂ ಜಮ್ಮು ಕಾಶ್ಮೀರ ಮತ್ತು ಮಧ್ಯ ಪ್ರದೇಶದಿಂದ ತಲಾ ಒಬ್ಬರನ್ನು ಬಂಧಿಸಲಾಗಿದೆ.