ನೋಟಿಸ್ ನೀಡದೆ ಬಂಧಿಸಿದರೆ ಮಾನವ ಹಕ್ಕಿನ ಉಲ್ಲಂಘನೆ : ಮೀರಾ ಸಕ್ಸೇನಾ

 ಪೊಲೀಸ್ ಸಿಬ್ಬಂದಿಗೆ ಕಾರ್ಯಾಗಾರ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : “ಪೊಲೀಸರು ಯಾರನ್ನಾದರೂ ಬಂಧಿಸುವ ಮುಂಚೆ ನೋಟಿಸ್ ನೀಡಬೇಕು. ನೋಟಿಸ್ ನೀಡದೇ ಬಂಧಿಸುವ ಅಥವಾ ವಿಚಾರಣೆಗಾಗಿ ಕರೆದೊಯ್ದರೆ ಅದು ಮಾನವ ಹಕ್ಕು ಉಲ್ಲಂಘನೆಯಾಗುತ್ತದೆ” ಎಂದು ರಾಜ್ಯ ಮಾನವ ಹಕ್ಕು ಆಯೋಗದ ಅಧ್ಯಕ್ಷೆ ಮೀರಾ ಸಕ್ಸೇನಾ ಹೇಳಿದರು.

ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಜರುಗಿದ ರಾಜ್ಯ ಮಾನವ ಹಕ್ಕುಗಳ ಆಯೋಗ, ಪೊಲೀಸ್ ಇಲಾಖೆ, ಗ್ಲೋಬಲ್ ಕನ್ಸರ್ನ್ ಇಂಡಿಯಾ ಮೊದಲಾದ ಸಂಘಟನೆಗಳ ಆಶ್ರಯದಲ್ಲಿ ಮಾನವ ಹಕ್ಕು, ಲಿಂಗತ್ವ ಸಮಾನತೆ ಮತ್ತು ಮಾನವ ಕಳ್ಳ ಸಾಗಾಣಿಕೆ ಕುರಿತು ಪೊಲೀಸ್ ಸಿಬ್ಬಂದಿಗೆ ಆಯೋಜಿಸಲಾದ ಕಾರ್ಯಾಗಾರವನ್ನು ಉದ್ಘಾಟಿಸಿದರು.

“ನೋಟಿಸ್ ನೀಡದೇ ಪೊಲೀಸರು ರಾತ್ರಿ ಹೊತ್ತು ಮನೆಗಳಿಗೆ ನುಗ್ಗುವುದು, ಬಂಧಿಸುವುದು, ಬೆದರಿಸುವುದು, ಅಮಾನುಷವಾಗಿ ಹೊಡೆಯುವುದು ಮಾಡಲು ಅವಕಾಶವಿಲ್ಲ. ಈ ರೀತಿ ಮಾಡುವ ಬದಲು ಕಾನೂನು ರೀತಿಯಲ್ಲಿ ಸಮಸ್ಯೆಯನ್ನು ಬಗೆಹರಿಸಬಹುದು. ಪೊಲೀಸರು ಮೊದಲು ಸಾರ್ವಜನಿಕರಿಗೆ ರಕ್ಷಣೆ ನೀಡುವ ಕೆಲಸ ಮಾಡಬೇಕು. ತಮ್ಮನ್ನು ರಕ್ಷಿಸಬೇಕಾದವರೆ ದೌರ್ಜನ್ಯ ಎಸಗಿದರೆ ವ್ಯವಸ್ಥೆಯ ಮೇಲೆ ಯಾರಿಗೂ ನಂಬಿಕೆ ಬರುವುದಿಲ್ಲ. ಎಲ್ಲಾ ಸಮಸ್ಯೆಗಳನ್ನು ಭಾವನಾತ್ಮಕವಾಗಿ, ಮಾನವೀಯ ನೆಲೆಯಲ್ಲಿ ಬಗೆಹರಿಸುವುದು ಕಷ್ಟಸಾಧ್ಯವಾದರೂ, ಕರ್ತವ್ಯ ನಿಷ್ಠೆ, ಕಾನೂನು ಕೈಗೆತ್ತಿಕೊಳ್ಳುವುದಕ್ಕೆ ಯಾರಿಗೂ ಅವಕಾಶವಿಲ್ಲ” ಎಂದು ಪೊಲೀಸರಿಗೆ ಅವರು ಸಲಹೆ ನೀಡಿದರು. ಪೊಲೀಸರನ್ನು ಕಂಡರೆ ಗೂಂಡಾಗಳು, ರೌಡಿಗಳು ಹೆದರಬೇಕು. ಆದರೆ ಇಂದು ಅಮಾಯಕರು, ಏನೂ ತಪ್ಪು ಮಾಡದವರು ಹೆದರುವಂತಾಗಿದೆ. ಈ ಪರಿಸ್ಥಿತಿ ಬದಲಾಗಬೇಕು ಎಂದರು.