ಕಲ್ಲಡ್ಕ ಗಲಭೆಗೆ ಪ್ರಭಾಕರ್ ಭಟ್ ಕಾರಣರಾಗಿದ್ದರೆ ಬಂಧಿಸಲಿ : ಎಚ್ಡೀಕೆ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : “ಕಲ್ಲಡ್ಕ ಪ್ರಭಾಕರ್ ಭಟ್ ಬಿ ಸಿ ರೋಡಿನ ಕಲ್ಲಡ್ಕದಲ್ಲಿ ನಡೆದಿರುವ ಗಲಭೆಗಳಿಗೆ ಕಾರಣವಾಗಿದ್ದರೆ ಅವರನ್ನು ಬಂಧಿಸಬೇಕಾಗಿತ್ತು. ಅದರ ಬದಲು ಮಾಧ್ಯಮಗಳಿಗೆ ಹೇಳಿಕೆ ಕೊಡುವುದು ಸರಿಯಲ್ಲ. ದ ಕ ಜಿಲ್ಲಾ ಉಸ್ತುವಾರಿ ಸಚಿವರು ಅಧಿಕಾರ ದುರುಪಯೋಗಪಡಿಸಿಕೊಂಡು ಪೊಲೀಸ್ ಅಧಿಕಾರಿಗಳ ಮೇಲೆ ಒತ್ತಡ ಹೇರುವುದು ಸರಿಯಲ್ಲ” ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಹೇಳಿದರು.

ಮಾಧ್ಯಮದೊಂದಿಗೆ ಮಾತನಾಡಿದ ಅವರು, “ಕಲ್ಲಡ್ಕದ ಗಲಭೆಯಲ್ಲಿ ಭಟ್ ಪಾತ್ರ ಇದ್ದರೆ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕಾಗಿತ್ತು. ವಿಳಂಬ ಮಾಡುವ ಅಗತ್ಯವೇನಿತ್ತು”ಎಂದು ಪ್ರಶ್ನಿಸಿದರು. “ಕಲ್ಲಡ್ಕದಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳು, ಕೋಮುಗಲಭೆಗಳಿಗೆ ಕೇಂದ್ರದ ಬಿಜೆಪಿ ಹಾಗೂ ರಾಜ್ಯದ ಕಾಂಗ್ರೆಸ್ ಸರಕಾರ ನೇರ ಹೊಣೆ. ಚುನಾವಣೆ ಬರುತ್ತಿರುವಂತೆ ಇವುಗಳು ಪೈಪೋಟಿ ನಡೆಸಿ ಗಲಭೆಗಳನ್ನು ಸೃಷ್ಟಿಸುತ್ತಿವೆ”ಎಂದರು.