ಶೇಕಡ 50ರಷ್ಟು ಬಿಜೆಪಿ ಅಭ್ಯರ್ಥಿಗಳು ಭ್ರಷ್ಟರು

 ಅಮಿತ್ ಶಾಗೆ ಪ್ರಮೋದ್ ಮುತಾಲಿಕ್ ಪತ್ರ

ಬೆಂಗಳೂರು : “ಕಳೆದ ಬಿಜೆಪಿ ಆಡಳಿತಾವಧಿಯಲ್ಲಿ ಭ್ರಷ್ಟಾಚಾರ ನಡೆಸಿದ ನಾಯಕರೇ 2018ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಾಕಾಂಕ್ಷಿಗಳಾಗಿದ್ದಾರೆ. ಇಂತಹ ಭ್ರಷ್ಟಾಚಾರಿ, ಜನವಿರೋಧಿ ನಾಯಕರಿಂದ ಬಿಜೆಪಿ ಅಧಿಕಾರಕ್ಕೆ ಬಂದರೆ ಜನರ ಹಿತವನ್ನು ಕಾಪಾಡಲು ಸಾಧ್ಯವಿಲ್ಲ” ಎಂದು ಪ್ರಮೋದ್ ಮುತಾಲಿಕ್ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾಗೆ ಬರೆದಿರುವ ಪತ್ರದಲ್ಲಿ ಎಚ್ಚರಿಸಿದ್ದಾರೆ.

“ಮುಂಬರುವ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿಯಲ್ಲಿ ಸ್ಪರ್ಧಾಕಾಂಕ್ಷಿಗಳಾಗಿರುವ ಶೇಕಡ 50ರಷ್ಟು ಬಿಜೆಪಿ ಅಭ್ಯರ್ಥಿಗಳು ಭ್ರಷ್ಟರಾಗಿದ್ದಾರೆ. ಇತ್ತೀಚೆಗೆ ಇಂಧನ ಸಚಿವ ಡಿ ಕೆ ಶಿವಕುಮಾರ್ ಮನೆ, ಮತ್ತಿತರೆಡೆ ಐಟಿ ಅಧಿಕಾರಿಗಳು ದಾಳಿ ನಡೆಸಿ, ಭಾರೀ ಸಂಪತ್ತನ್ನು ವಶಪಡಿಸಿಕೊಂಡರು. ಈ ಬಗ್ಗೆ ರಾಜ್ಯ ಬಿಜೆಪಿಯ ಯಾವ ನಾಯಕರೂ ಮಾತನಾಡಿಲ್ಲ. ಇದು ಬಿಜೆಪಿಯಲ್ಲಿರುವ ತಾವೂ ಭ್ರಷ್ಟಾಚಾರಿಗಳ ಪರವಾಗಿದ್ದೇವೆ ಎಂದು ಸಾರಿದಂತಾಗಿದೆ” ಈ ಕುರಿತು ಬಿಜೆಪಿ ರಾಷ್ಟಾಧ್ಯಕ್ಷ ಅಮಿತ್ ಶಾ ಗಮನಹರಿಸಬೇಕು ಎಂದು ಮುತಾಲಿಕ್ ಹೇಳಿದ್ದಾರೆ.

“ರಾಜ್ಯದ ಜನತೆ ಬಿಜೆಪಿಗೆ ಸರಕಾರ ರಚಿಸಲು ಒಂದು ಉತ್ತಮ ಅವಕಾಶ ನೀಡಿದ್ದರು. ಈ ಅವಕಾಶವನ್ನು ಜನಪರವಾಗಿ ಉಪಯೋಗಿಸಬೇಕಾಗಿದ್ದ ಬಿಜೆಪಿ ಸಚಿವರು, ಕಾಂಗ್ರೆಸ್ 50 ವರ್ಷದಲ್ಲಿ ಮಾಡಿದ ಭ್ರಷ್ಟಾಚಾರವನ್ನು ಕೇವಲ ಐದು ವರ್ಷದಲ್ಲಿ ಮಾಡಿ ಮುಗಿಸಿದ್ದರು. ಹೀಗಾಗಿ ಅಧಿಕಾರ ಕಳೆದುಕೊಳ್ಳಬೇಕಾಯಿತು. ಹೀಗಾಗಿ ಶೇಕಡ 50ಕ್ಕಿಂತ ಹೆಚ್ಚು ಬಿಜೆಪಿ ನಾಯಕರನ್ನು ಬದಲಾಯಿಸುವ ಅಗತ್ಯವಿದೆ” ಎಂದು ಪ್ರಮೋದ್ ಮುತಾಲಿಕ್ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.