ಕಿರುಕುಳ ದೂರು ನೀಡಿದ ಸೇನಾಧಿಕಾರಿ ಶೇಖಾವತ್

2011ರಲ್ಲಿ ಸೇನಾಪಡೆಗೆ ಮುಜುಗರ ತಂದ ಕಾರ್ಯಾಚರಣೆಯೊಂದರ ಬಗ್ಗೆ ಮಾತನಾಡಿದ್ದಕ್ಕಾಗಿ ಇಬ್ಬರು ಮಾಜಿ ಸೇನಾ ಮುಖ್ಯಸ್ಥರು ಮತ್ತು ಹಿರಿಯ ಅಧಿಕಾರಿಯೊಬ್ಬರು ತಮಗೆ ಕಿರುಕುಳ ನೀಡುತ್ತಿರುವುದಾಗಿ ಸೇನಾ ಅಧಿಕಾರಿ ಕರ್ನಲ್ ಸೌರಭ್ ಸಿಂಗ್ ಶೇಖಾವತ್ ಆರೋಪಿಸಿದ್ದಾರೆ. ಮಾಜಿ ಮುಖ್ಯಸ್ಥ ಜನರಲ್ ಬಿಕ್ರಮ್ ಸಿಂಗ್, ಅವರ ನಂತರದ ಜನರಲ್ ದಲ್ಬೀರ್ ಸಿಂಗ್ ಮತ್ತು ಲೆಫ್ಟಿನೆಂಟ್ ಅಭಯ್ ಕೃಷ್ಣರ ವಿರುದ್ಧ ಸೇನಾ ಮುಖ್ಯಕಚೇರಿಗೆ ಅವರು ದೂರು ನೀಡಿದ್ದಾರೆ.

“ನಾನು ಅತ್ಯುನ್ನತ ಪದವಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ ವ್ಯವಸ್ಥಿತವಾಗಿ ಹಿರಿಯ ಸ್ಥಾನದಲ್ಲಿರುವ ಅಧಿಕಾರಿಗಳು ನನಗೆ ಕಿರುಕುಳ ಕೊಟ್ಟಿದ್ದಾರೆ” ಎಂದು ಶೇಖಾವತ್ ಹೇಳಿದ್ದಾರೆ.

ಶೇಖಾವತರ ಆರೋಪದಿಂದಾಗಿ ಹಿರಿಯ ಅಧಿಕಾರಿಗಳ ನಡುವೆ ವಾಕ್ಸಮರಕ್ಕೆ ಕಾರಣವಾಗಿದ್ದ ಜೋರ್ಹಾಟ್ ಕಾರ್ಯಾಚರಣೆ ಮತ್ತೆ ಮುನ್ನೆಲೆಗೆ ಬಂದಿದೆ. ಜನರಲ್ ದಲ್ಬೀರ್ ಸಿಂಗ್ ಮತ್ತು ಲೆಫ್ಟಿನೆಂಟ್ ಜನರಲ್ ಕೃಷ್ಣಾ ಈ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ. ಜನರಲ್ ಬಿಕ್ರಮ್ ಸಿಂಗ್ ತಮಗೆ ಈ ಪ್ರಕರಣದ ಬಗ್ಗೆ ನೆನಪಿಲ್ಲ ಎಂದಿದ್ದಾರೆ. ಇಂತಹ ದೂರುಗಳ ವಿಚಾರಣೆ ನಡೆಯಲು ಆರೇಳು ತಿಂಗಳುಗಳು ನಡೆಯುತ್ತವೆ ಎಂದು ಸೇನಾಧಿಕಾರಿಯೊಬ್ಬರು ಹೇಳಿದ್ದಾರೆ. ಅಸೋಮ್ ಉಗ್ರರ ಜೊತೆಗೆ ಸಂಪರ್ಕವಿರುವ ಸಂಶಯದಲ್ಲಿ 2011 ಡಿಸೆಂಬರ್ 20ರಂದು ಸೇನಾ ಗುಪ್ತಚರರು ಜೋರ್ಹಾಟ್ ಉದ್ಯಮಿ ಸುರ್ಜಿತ್ ಗೊಗೊಯ್ ಮನೆಗೆ ದಾಳಿ ನಡೆಸಿ ನಗದು, ಚಿನ್ನ ಮತ್ತು ಮೊಬೈಲ್ ಫೋನುಗಳನ್ನು ಕೊಂಡೊಯ್ದಿದ್ದರು. ಇದು ಕಳ್ಳತನ ಎಂದು ಸುರ್ಜಿತ್ ದೂರು ದಾಖಲಿಸಿದ್ದರು. ಆ ಸಂದರ್ಭದಲ್ಲಿ ಶೇಖಾವತ್ ಜೋರ್ಹಾಟ್ ಸೇನಾನೆಲೆಯಲ್ಲೇ ಇದ್ದರೂ ಅವರಿಗೆ ದಾಳಿಯ ಮಾಹಿತಿಯಿರಲಿಲ್ಲ.