ಶಾಲೆಗೆ ನುಗ್ಗಿ ಪತ್ನಿ, ವಿದ್ಯಾರ್ಥಿ ಹತ್ಯೆಗೈದು ಗುಂಡಿಕ್ಕಿಕೊಂಡು ಆತ್ಮಹತ್ಯೆಗೈದ ಬಂದೂಕುಧಾರಿ

ಕ್ಯಾಲಿಫೋರ್ನಿಯಾ : ಸ್ಯಾನ್ ಬರ್ನಾರ್ಡಿನೋ ಎಂಬಲ್ಲಿರುವ ನಾರ್ತ್ ಪಾರ್ಕ್ ಎಲಿಮೆಂಟರಿ ಶಾಲೆಗೆ ಸೋಮವಾರ ನುಗ್ಗಿದ ಬಂದೂಕುಧಾರಿ ವ್ಯಕ್ತಿಯೊಬ್ಬ ಅಲ್ಲಿನ ತರಗತಿಯೊಂದರಲ್ಲಿ ಭಿನ್ನ ಸಾಮಥ್ಯದ ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದ ತನ್ನ ಶಿಕ್ಷಕಿ ಪತ್ನಿಯನ್ನು ಗುಂಡಿಟ್ಟು ಸಾಯಿಸಿದ್ದು ಕೊನೆಗೆ ತಾನೂ ಗುಂಡಿಕ್ಕಿಕೊಂಡು ಪ್ರಾಣ ತ್ಯಜಿಸಿದ್ದಾನೆ. ಈ ಗೊಂದಲದಲ್ಲಿ ತರಗತಿಯಲ್ಲಿದ್ದ  15 ಮಕ್ಕಳಲ್ಲಿ ಇಬ್ಬರು ಮಕ್ಕಳಿಗೆ ಗುಂಡಿನ ಗಾಯಗಳಾಗಿದ್ದು ಅವರಲ್ಲಿ ಒಬ್ಬ ಬಾಲಕ ಪ್ರಾಣ ಕಳೆದುಕೊಂಡಿದ್ದಾನೆ. ಶಾಲೆಗೆ ನುಗ್ಗಿದ ಬಂದೂಕುಧಾರಿಯನ್ನು 53 ವರ್ಷದ ಸೆಡ್ರಿಕ್ ಆಂಡರ್ಸನ್ ಎಂದು ಗುರುತಿಸಲಾಗಿದೆ. ಘಟನೆಯ ನಂತರ ಶಾಲೆಯಲ್ಲಿದ್ದ ಸುಮಾರು 600 ಮಕ್ಕಳನ್ನು ಹತ್ತಿರದ ಕೆಜೊನ್ ಶಾಲೆಗೆ ಸ್ಥಳಾಂತರಿಸಲಾಗಿದ್ದು ಹೆತ್ತವರು ಅಲ್ಲಿಗೆ ಧಾವಿಸಿ ತಮ್ಮ ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗಿದ್ದಾರೆ.