ಪಿಸ್ತೂಲ್, ಮಾರಕಾಸ್ತ್ರ ತೋರಿಸಿ ಅಡಿಕೆ ವ್ಯಾಪಾರಿಯ 5 ಲಕ್ಷ ರೂ ದರೋಡೆ

ಸಾಂದರ್ಭಿಕ ಚಿತ್ರ

ಸುಳ್ಯ : ಕಾರಿನಲ್ಲಿ ತೆರಳುತ್ತಿದ್ದ ಅಡಿಕೆ ವ್ಯಾಪಾರಿಯೊಬ್ಬರನ್ನು ಅಡ್ಡಗಟ್ಟಿ, ಪಿಸ್ತೂಲ್ ಮತ್ತು ಮಾರಕಾಸ್ತ್ರಗಳನ್ನು ತೋರಿಸಿ ಬೆದರಿಸಿದ ನಾಲ್ವರು ದರೋಡೆಕೋರರು ಐದು ಲಕ್ಷ ರೂ ನಗದು ಹಾಗೂ ಮೊಬೈಲುಗಳನ್ನು ದೋಚಿ ಪರಾರಿಯಾದ ಘಟನೆ ಬೆಳ್ಳಾರೆಯ ಐವರ್ನಾಡುವಿನಲ್ಲಿ ಸೋಮವಾರ ಮುಂಜಾನೆ ನಡೆದಿದೆ.

ಗುತ್ತಿಗಾರಿನಲ್ಲಿ ಅಡಕೆ ವ್ಯಾಪಾರಿಯಾಗಿರುವ ಪ್ರಗತಿ ಅಡಿಕೆ ಅಂಗಡಿ ಮಾಲಿಕ ಅಬ್ದುಲ್ ಖಾದರ್ ಬಯಂಬಾಡಿ ಎಂಬವರು ಸೋಮವಾರ ಬೆಳಿಗ್ಗೆ ತಮ್ಮ ಸ್ನೇಹಿತ ಶಫೀಕ್ ಮತ್ತಿಬ್ಬರ ಜೊತೆಗೆ 7.30ರ ಸುಮಾರಿಗೆ ಬೆಳ್ಳಾರೆಯಿಂದ ಗುತ್ತಿಗಾರಿನ ಕಡೆಗೆ ತೆರಳುತ್ತಿದ್ದಾಗ ಐವರ್ನಾಡಿನಲ್ಲಿ ದರೋಡೆಕೋರರು ಪಿಸ್ತೂಲ್ ಮತ್ತು ತಲವಾರು ತೋರಿಸಿ ಕಾರಿನಲ್ಲಿದ್ದ ಐದು ಲಕ್ಷ ರೂ ನಗದು ಹಾಗೂ ಮೊಬೈಲ್ ಕಳವು ಮಾಡಿದ್ದಾರೆ. ಇವರ ಕಾರನ್ನು ಹಿಂಬಾಲಿಸಿಕೊಂಡು ಬಂದಿದ್ದ ಇನ್ನೊಂದು ಕಾರಿನಿಂದ ಇಳಿದ ದರೋಡೆಕೋರರ ತಂಡ ಐವರ್ನಾಡು ಬಳಿ ಏಕಾಏಕಿಯಾಗಿ ಇವರ ಮೇಲೆ ಮುಗಿ ಬಿದ್ದಿದೆ.

ದರೋಡೆಕೋರರು ಸುಮಾರು 25ರಿಂದ 30ರ ಹರೆಯದವರು. ಕೈಯಲ್ಲಿ ಪಿಸ್ತೂಲು ಮತ್ತು ತಲ್ವಾರಿನಂತಹ ಮಾರಕಾಸ್ತ್ರಗಳನ್ನು ಹಿಡಿದುಕೊಂಡಿದ್ದರು. ಕಾರನ್ನು ಸುತ್ತುವರಿದ ಇವರು ಕಾರಿನೊಳಗೆ ಇದ್ದ ನಾಲ್ವರಿಂದಲೂ ಬಲವಂತವಾಗಿ ನಗದು ಹಣ, ಚೆಕ್ ಪುಸ್ತಕ, ಮೊಬೈಲ್ ದರೋಡೆ ಮಾಡಿದ್ದಾರೆ. ಬಳಿಕ ಬೆಳ್ಳಾರೆ ಕಡೆಗೆ ಕಾರು ಅತೀ ವೇಗದಲ್ಲಿ ತೆರಳಿ ಕಣ್ಮರೆಯಾಗಿದೆ ಎಂದವರು ಹೇಳಿದ್ದಾರೆ.

ದರೋಡೆಕೋರರು ಹಿಂದಿ ಭಾಷೆಯಲ್ಲಿ ಮಾತನಾಡುತ್ತಿದ್ದರು ಎನ್ನಲಾಗಿದೆ. ಟೀ-ಶರ್ಟ್ ಧರಿಸಿದ್ದರು. ಹಳೇ ಕಾರಿನಲ್ಲಿ ಹಿಂಬಾಲಿಸಿಕೊಂಡು ಬಂದಿದ್ದರು. ಹಸಿರು, ಕೆಂಪು ಮತ್ತು ಕಪ್ಪು ಬಣ್ಣದ ಟೀಶರ್ಟ್ ಧರಿಸಿದ್ದು, ಮುಖವಾಡ ಧರಿಸಿದ್ದರು ಎಂದು ತಿಳಿದುಬಂದಿದೆ.

ಘಟನೆ ವಿಚಾರ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಧಾವಿಸಿ ವಿಚಾರಣೆ ಆರಂಭಿಸಿದ್ದಾರೆ. ಕಾರಿನ ವಿವರ ಪಡೆದುಕೊಂಡ ಅವರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.