ವಿಟ್ಲದಲ್ಲಿ ಅಡಿಕೆ ಕಳ್ಳರ ಕಾಟ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ವಿಟ್ಲ : ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ಮತ್ತೆ ಅಡಿಕೆ ಕಳ್ಳರ ಕಾಟ ಮುಂದುವರಿದಿದ್ದು ವಿಟ್ಲ ಪಡ್ನೂರು ಗ್ರಾಮದಲ್ಲಿ ಸಹೋದರರಿಬ್ಬರ ಮನೆಯಲ್ಲಿ ಶೇಖರಿಸಿಟ್ಟಿದ್ದ 35 ಸಾವಿರ ಒಣ ಅಡಿಕೆಗಳನ್ನು ಕಳ್ಳತನ ಮಾಡಲಾಗಿದೆ.

ಕೆಲದಿನಗಳ ಹಿಂದಷ್ಟೆ ಕೇಪು ಗ್ರಾಮದ ನೀರ್ಕಜೆ ನಿವಾಸಿ ಹನೀಫ್ ಎಂಬವರ ಕೊಟ್ಟಿಗೆಯಿಂದ 12 ಗೋಣಿ ಅಡಿಕೆ ಕಳ್ಳತನ ನಡೆದಿತ್ತು. ಅಡಿಕೆ ಗೋಣಿಗಳನ್ನು ಮಹಿಂದ್ರಾ ಪಿಕಪ್ ವಾಹನದಲ್ಲಿ ಖದೀಮರು ಹೊತ್ತೊಯ್ದಿರುವ ಖಚಿತ ಮಾಹಿತಿ ಸಾರ್ವಜನಿಕರಿಂದ ಪತ್ರಿಕೆಗೆ ಲಭ್ಯವಾಗಿದೆ.

ಇದೀಗ ಮತ್ತೆ ವಿಟ್ಲ ಪಡ್ನೂರು ಗ್ರಾಮದ ಸರವು ಮದಕ ನಿವಾಸಿ ಉಮ್ಮರ್  ಎಂಬವರ ಮನೆಯಲ್ಲಿ ಗೋಣಿ ಚೀಲಗಳಲ್ಲಿ ಶೇಖರಿಸಿಟ್ಟಿದ್ದ 25 ಸಾವಿರ ಒಣ ಅಡಿಕೆ ಮತ್ತು ಸಹೋದರ ಅಬ್ದುಲ್ ರಝಾಕ್ ಮನೆಯಿಂದ 10 ಸಾವಿರ ಒಣ ಅಡಿಕೆ ಮಂಗಳವಾರ ನಡುರಾತ್ರಿಯಲ್ಲಿ ಕಳ್ಳತನವಾಗಿದೆ.

ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ಸಕ್ರಿಯವಾಗಿರುವ ಕುಖ್ಯಾತ ಅಂತರ್ರಾಜ್ಯ ಕಳ್ಳರ ತಂಡವನ್ನು ವರ್ಷದ ಹಿಂದಷ್ಟೆ ಅಂದಿನ ಎಸ್ ಐ ಪ್ರಕಾಶ್ ದೇವಾಡಿಗ ಮತ್ತು ಸಿಬ್ಬಂದಿಗಳು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದರು. ರಾತ್ರಿ ಹತ್ತು ಗಂಟೆಯ ಬಳಿಕ ಓಡಾಡುತ್ತಿರುವ ಅದೇ ತಂಡ ಇದೀಗ ಮತ್ತೆ ಬಾಲ ಬಿಚ್ಚಿಕೊಂಡಿರುವುದು ನಾಗರಿಕರ ಆತಂಕಕ್ಕೆ ಕಾರಣವಾಗಿದೆ.