ನಿಲ್ಲಿಸಿದ ಲಾರಿ, ಅಂಗಡಿಯಿಂದ ಅಡಿಕೆ ಕಳವು

ನಮ್ಮ ಪ್ರತಿನಿಧಿ ವರದಿ

ಪುತ್ತೂರು : ಗ್ರಾಮೀಣ ಭಾಗದಲ್ಲಿ ಅಡಿಕೆ ಹಾಗೂ ಮನೆ ಕಳವು ನಡೆಸುತ್ತಿದ್ದ ಆರು ಮಂದಿ ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ ತಿಂಗಳ ಬಳಿಕ ಮತ್ತೆ ಗ್ರಾಮಾಂತರದಲ್ಲಿ ಅಡಿಕೆ ಕಳವು ಪ್ರಕರಣ ನಡೆದಿದ್ದು, ಮತ್ತೆ ಪೊಲೀಸರನ್ನು ನಿದ್ದೆಗೆಡಿಸಿದೆ.

ಇರ್ದೆ ಗ್ರಾಮದ ಇರ್ದೆ ನಿವಾಸಿ ಶಾಹುಲ್ ಹಮೀದ್ ಎಂಬವರ ಅಡಿಕೆ ಅಂಗಡಿಯ ಶಟರ್ ಮುರಿದು ಸುಮಾರು 45 ಸಾವಿರ ರೂ ಮೌಲ್ಯದ ಅಡಿಕೆಯನ್ನು ಕಳವು ಮಾಡಿದ್ದರೆ, ಅಂಗಡಿಯ ಹತ್ತಿರವೇ ನಿಲ್ಲಿಸಿದ್ದ ಬಶೀರ್ ಎಂಬವರಿಗೆ ಸೇರಿದ ಲಾರಿಯಿಂದ 41 ಸಾವಿರ ಮೌಲ್ಯದ ಅಡಿಕೆಯನ್ನು ಕಳವು ಮಾಡಲಾಗಿದೆ. ಎರಡೂ ಕೃತ್ಯಗಳು ಒಂದೇ ದಿನ ನಡೆದಿದೆ. ಗ್ರಾಮಾಂತರ ಭಾಗದಲ್ಲಿ ಪುಡಿಗಳ್ಳರ ಹಾವಳಿ ನಿತ್ಯ ನರಕವಾಗಿದ್ದು, ಶಟರ್ ಮುರಿದು ಕಳವು ನಡೆಸುವ ಜಾಲ ಸಕ್ರಿಯವಾಗಿದೆ.

6 ಮಂದಿ ಕುಖ್ಯಾತ ಕಳ್ಳರನ್ನು ಬಂಧಿಸಿ ಅವರು ಜೈಲಿನಲ್ಲಿರುವಾಗಲೇ ಇನ್ನೊಂದು ತಂಡ ಇದೇ ಕೃತ್ಯದಲ್ಲಿ ತೊಡಗಿರುವುದು ಗ್ರಾಮಸ್ಥರ ನೆಮ್ಮದಿಯನ್ನು ಕೆಡಿಸಿದೆ. ಗ್ರಾಮಾಂತರ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.