ಇನ್ನೊಂದು ತಿಂಗಳೊಳಗೆ ಅಡಿಕೆ ಬೆಲೆÀ 300ಕ್ಕೆ ?

ವಿಶೇಷ ವರದಿ

ಮಂಗಳೂರು : ಕೇಂದ್ರ ಸರ್ಕಾರವು ಅಡಿಕೆ ಆಮದು ಸುಂಕವನ್ನು ರೂ 162ರಿಂದ ರೂ 250ಕ್ಕೆ ಹೆಚ್ಚಿಸಿದ್ದು, ಮುಂಬರುವ ದಿನಗಳಲ್ಲಿ ಆಮದು ಆಕರ್ಷಣೆ ಇಳಿಕೆಯಾಗಲಿದ್ದು, ಪರಿಣಾಮ ದೇಶೀ ಅಡಿಕೆಗೆ ಬೇಡಿಕೆ ಹೆಚ್ಚಾಗಲಿದೆ. ಅದೇ ರೀತಿ ಪ್ರಸಕ್ತ ಇರುವ ಅಡಿಕೆ ಬೆಲೆ ಕನಿಷ್ಟ ರೂ 30 ಏರಿಕೆಯಾಗುವ ಸಾಧ್ಯತೆ ಇದೆ.

ಪ್ರಸಕ್ತ ಅಡಿಕೆ ಮಾರುಕಟ್ಟೆ ದರ ಕೇಜಿಗೆ ರೂ 260ರಿಂದ 265 ಇದ್ದು, ಇದು ಇನ್ನೊಂದು ತಿಂಗಳಲ್ಲಿ ಕೇಜಿಗೆ ರೂ 300 ದರವನ್ನು ತಲುಪುವ ನಿರೀಕ್ಷೆಯಿದೆ. ಸರ್ಕಾರ ಆಮದು ಸುಂಕ ಮೌಲ್ಯ ಹೆಚ್ಚಿಸುತ್ತಿದ್ದಂತೆ ಅಡಿಕೆ ದರ ಹೆಚ್ಚಾಗಿರುವುದು ಇದಕ್ಕೆ ಸಾಕ್ಷಿಯಾಗಿದೆ.

ಅದೇ ರೀತಿ ಕೆಂಪು ಅಡಿಕೆ ಬೆಲೆ ಕೇಜಿಗೆ ರೂ 210ಕ್ಕೆ ತಲುಪಿದೆ. ಅಡಿಕೆ ಬೆಳೆಗಾರರು ನೋಟು ಅಮಾನ್ಯದ ಬಳಿಕ ಅಡಿಕೆ ದರ ಇಳಿಕೆಯಾಗಬಹುದೆಂಬ ಭೀತಿಯಲ್ಲಿದ್ದರು. ಇದೇ ವೇಳೆ ಕ್ಯಾಂಪ್ಕೋ ಅಡಿಕೆ ಬೆಳೆಗಾರರಲ್ಲಿ ತಮ್ಮ ಅಡಿಕೆಯನ್ನು ಮಾರಾಟ ಮಾಡದೆ  ಎರಡು ತಿಂಗಳು ಕಾದು ನೋಡುವಂತೆ ಸೂಚಿಸಿತ್ತು.

ಅಡಿಕೆ ಮಾರುಕಟ್ಟೆಯಲ್ಲಿ ಸ್ಥಿರತೆಯನ್ನು ತರುವ ನಿಟ್ಟಿನಲ್ಲಿ ಕ್ಯಾಂಪ್ಕೋ ಅಡಿಕೆ ಖರೀದಿಗೆ ಮಿತಿಯನ್ನು ಪ್ರತಿ ಒಬ್ಬ ಸದಸ್ಯಗೆ ವಾರದಲ್ಲಿ ರೂ 24,000 ಎಂದು ನಿಗದಿಪಡಿಸಿತ್ತು. 50 ದಿನಗಳ ನಂತರ ಕ್ಯಾಂಪ್ಕೋ ಈ ಮಿತಿಯನ್ನು ಸಡಿಲಿಸಿತ್ತು. ಜನವರಿ 9ರಿಂದ ಅನ್ವಯಿಸುವಂತೆ ಒಬ್ಬ ಸದಸ್ಯಗೆ ತಿಂಗಳಿಗೆ ಐದು ಕ್ವಿಂಟಾಲಿಗೆ ಸಡಿಲಿಸಿತ್ತು. ಈ ಮುನ್ಸೂಚನೆಯಿಂದಾಗಿ ಬೆಳೆಗಾರರು ತಮ್ಮ ಉತ್ಪಾದನೆ ಮಾರಾಟವನ್ನು ಒಂದು ತಿಂಗಳು ಮುಂದೂಡಿದರು. ಕ್ಯಾಂಪ್ಕೋದ ಈ ಪ್ರಕ್ರಿಯೆ ಅಡಿಕೆ ಮಾರುಕಟ್ಟೆಯಲ್ಲಿ ಸ್ಥಿರತೆ ಕಾಪಾಡಲು ನೆರವಾಯಿತು.

“ಈ ವರ್ಷದ ಪ್ರಾರಂಭದಲ್ಲಿ ಅಡಿಕೆ ಮಾರುಕಟ್ಟೆ ದರ ಕೇಜಿಗೆ ಕೇವಲ ರೂ 150 ಇತ್ತು. ಆಮದು ಸುಂಕ ಮೌಲ್ಯ ಹೆಚ್ಚಳ ಅಡಿಕೆ ಬೆಳೆಗಾರರಲ್ಲಿ ಆಶಾಭಾವನೆಯನ್ನು ಮೂಡಿಸಿದೆ. ಇದೇ ವೇಳೆ ಅಡಿಕೆ ಉತ್ಪಾದನಾ ವೆಚ್ಚ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದು, ಹಾಗಾಗಿ ಅಡಿಕೆ ಕೇಜಿಗೆ ರೂ 250 ಬೆಂಬಲ ಬೆಲೆ ನಿಗದಿಗೊಳಿಸುವಂತೆ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಿದ್ದೇವೆ” ಎಂದು ಕ್ಯಾಂಪ್ಕೋ ಮಾಜಿ ಅಧ್ಯಕ್ಷ ಕೊಂಕೊಡಿ ಪದ್ಮನಾಭ ಹೇಳಿದ್ದಾರೆ.

“ಎರಡು ದಿನಗಳ ಹಿಂದೆ ಕೇಂದ್ರ ಸರ್ಕಾರ ಅಡಿಕೆ ಆಮದು ಸುಂಕ ಮೌಲ್ಯವನ್ನು ಹೆಚ್ಚಿಸಿದ್ದು, ಇದರಿಂದಾಗಿ ಶೀಘ್ರದಲ್ಲೇ ಅಡಿಕೆ ಬೆಲೆ ಪ್ರಸಕ್ತ ಇರುವ ಬೆಲೆಗಿಂತ ರೂ 30 ಹೆಚ್ಚಾಗಲಿದ್ದು, ಕೇಜಿಗೆ ರೂ 180ಕ್ಕೆ ಏರಲಿದೆ. ಹೆಚ್ಚಿದ ಆಮದು ಸುಂಕ ಮೌಲ್ಯದ ಪರಿಣಾಮವಾಗಿ ಆಮದು ಕಡಿಮೆಯಾಗಲಿದೆ. ಇದರಿಂದಾಗಿ ದೇಶೀ ಅಡಿಕೆ ಬೆಳೆಗಾರರ ಅಡಿಕೆಗಳಿಗೆ ಬೇಡಿಕೆ ಹೆಚ್ಚಾಗಲಿದೆ” ಎಂದು ಕ್ಯಾಂಪ್ಕೋ ವ್ಯವಸ್ಥಾಪಕ ನಿರ್ದೇಶಕ ಸುರೇಶ್ ಭಂಡಾರಿ ಹೇಳಿದ್ದಾರೆ.