ನೀವು ಗಹನ ಚಿಂತಕರೇ ?

ಬದುಕು ಬಂಗಾರ-101

ನೀವು ಪ್ರತಿಯೊಂದು ವಿಚಾರವನ್ನೂ ಆಳವಾಗಿ ಯೋಚಿಸುವವರೇ ? ಹಾಗಿದ್ದರೆ ಸದಾ ಗಹನವಾಗಿ ಯೋಚಿಸುವ ನೀವು ಭವಿಷ್ಯದಲ್ಲಿ ಎದುರಾಗಬಹುದಾದ ಸಮಸ್ಯೆಗಳ ಬಗ್ಗೆಯೂ ಬಹಳ ಬೇಗನೇ ಅರಿಯುತ್ತೀರಿ. ಹೀಗೆ ಆಳವಾಗಿ ಚಿಂತಿಸುವವರು ಕೆಲವೊಮ್ಮೆ ತಮ್ಮ ಯೋಚನೆಗಳಿಂದ ವಾಸ್ತವ ಜಗತ್ತಿನಿಂದ ದೂರ ಹೋಗುವುದೂ ಉಂಟು. ಹಾಗಾದರೆ ನೀವೂ ಈ ಗುಂಪಿಗೆ ಸೇರಿದವರೇ ? ಇಂತಹ ಜನರು ಹೇಗಿರುತ್ತಾರೆ ?

ಅಂರ್ತಮುಖಿಯಾಗಿರುತ್ತಾರೆ : ಆಳ ಚಿಂತಕರು ಸಾಮಾನ್ಯವಾಗಿ ಅಂರ್ತಮುಖಿಗಳಾಗುತ್ತಾರೆ, ಮೌನವಾಗಿರುವವರಾಗಿರುತ್ತಾರೆ. ಅವರು ಹೆಚ್ಚಿನ ಸಮಯ ಇತರರೊಡನೆ ಬೆರೆಯದೆ ತಾವೇ ಯೋಚಿಸುತ್ತಾ ಇರುತ್ತಾರೆ. ಸದ್ದುಗದ್ದಲಗಳ ನಡುವೆಯೂ ಹೀಗೆಯೇ ಇದ್ದು ಬಿಡುವ ಅವರು ಕೆಲವೊಮ್ಮೆ ತೀರಾ ಕಂಗೆಟ್ಟವರಂತೆಯೂ ಕಾಣುತ್ತಾರೆ.

ಅನುಭವಗಳನ್ನು ವಿಶ್ಲೇಷಿಸುತ್ತಾರೆ : ಆಳ ಚಿಂತಕರು, ಭೂತಕಾಲದ, ವರ್ತಮಾನದ ಹಾಗೂ ಭವಿಷ್ಯದ ಘಟನೆಗಳನ್ನು ಸದಾ ಅವಲೋಕಿಸುತ್ತಿರುತ್ತಾರೆ. ಹಿಂದಿನ ಅನುಭವಗಳನ್ನೂ ಈಗಿನ ಅನುಭವಗಳನ್ನೂ ಹೋಲಿಸುವ ಯತ್ನ ನಡೆಸುತ್ತಾರೆ. ಗತ ಅನುಭವಗಳಿಂದ ಪಾಠ ಕಲಿತು ಭವಿಷ್ಯವನ್ನು ಉಜ್ವಲಗೊಳಿಸಲು ಅವರು ಯತ್ನಿಸುತ್ತಾರೆ.

ಅನುಕಂಪದಿಂದ ಅವರು ವರ್ತಿಸುತ್ತಾರೆ : ಗಹನ ಚಿಂತಕರು ಯಾವತ್ತೂ ಕರುಣಾಮಯಿಗಳಾಗುತ್ತಾರೆ, ಇತರರ ಭಾವನೆಗಳನ್ನು ಗೌರವಿಸುತ್ತಾರೆ ಅವರ ಎಲ್ಲಾ ಉತ್ತಮ ಕಾರ್ಯಗಳಲ್ಲಿ ಅವರಿಗೆ ಬೆಂಬಲ ನೀಡುತ್ತಾರೆ.

ಮುಕ್ತಮನಸ್ಸಿನವರು : ಯಾವುದೇ ವಿಚಾರವಿರಲಿ ಅದನ್ನು ಗಹನವಾಗಿ ಯೋಚಿಸುವವರು ಮುಕ್ತ ಮನಸ್ಸು ಹೊಂದಿರುತ್ತಾರೆ. ಹೊಸ ವಿಚಾರಗಳಿಗೆ ಅವರ ಮನಸ್ಸು ಸದಾ ತೆರೆದಿರುತ್ತದೆ. ಹೆಚ್ಚ್ಚು ಹೆಚ್ಚು ಜ್ಞಾನ ಸಂಪಾದಿಸುವ ಇಚ್ಛೆ ಅವರದ್ದು. ಆದರೆ ಕಣ್ಣು ಮುಚ್ಚಿ ಯಾವುದೇ ಹೊಸ ವಿಚಾರವನ್ನು ಅವರು ಒಪ್ಪುವುದಿಲ್ಲ. ಎಲ್ಲವನ್ನೂ ಪರಾಮರ್ಶಿಸುತ್ತಾರೆ, ನಂತರ ಸೂಕ್ತವಾದ ತೀರ್ಮಾನ ಕೈಗೊಳ್ಳುವವರು ಅವರು.