ನನ್ನ ಇರಾದೆ ಧರ್ಮಸಮ್ಮತವೇ?

ಸಾಂದರ್ಭಿಕ ಚಿತ್ರ

ಪ್ರ : ನನ್ನ ವಯಸ್ಸು 28. ಬಿ.ಕಾಂ ಓದಿ ಸಹಕಾರೀ ಬ್ಯಾಂಕೊಂದರಲ್ಲಿ ಕ್ಲರ್ಕ್ ಕೆಲಸ ಮಡುತ್ತಿದ್ದೇನೆ. ನಾನು ಕೆಲಸ ಮಾಡುವ ಸ್ಥಳದಿಂದ 25 ಕಿಲೋಮೀಟರ್ ದೂರದಲ್ಲಿ ನಮ್ಮ ಹಳ್ಳಿಯಿರುವುದರಿಂದ ಪ್ಯಾಟೆಯಲ್ಲಿಯೇ ರೂಮು ಮಾಡಿಕೊಂಡು ಇದ್ದೇನೆ. ಇದ್ದ ಒಬ್ಬ ಅಣ್ಣ ಮದುವೆ ಮಾಡಿಕೊಂಡು ಊರಿನಲ್ಲಿ ಕೃಷಿ ನೋಡಿಕೊಂಡು ಅಮ್ಮ, ಅಪ್ಪನ ಜೊತೆ ಇದ್ದ. ನನಗೂ ಈ ವರ್ಷ ಮದುವೆ ಮಾಡಲು ಹುಡುಗಿ ನೋಡುತ್ತಿದ್ದರು. ಆದರೆ ವಿಧಿಗೆ ನಮ್ಮ ಸಂಸಾರದ ನೆಮ್ಮದಿ ನೋಡಲಾಗಿಲ್ಲವೋ ಏನೋ. ಕಳೆದ ಮಳೆಗಾಲದಲ್ಲಿ ಅಣ್ಣ ಅಜ್ಜನ ತಿಥಿಗೋಸ್ಕರ ತರಕಾರೀ ಮತ್ತಿತರ ಸಾಮಾನುಗಳನ್ನು ತೆಗೆದುಕೊಂಡು ಹೋಗಲು ಪ್ಯಾಟೆಗೆ ಬಂದಿದ್ದ. ಎಲ್ಲಾ ಸಾಮಾನುಗಳನ್ನು ಹೇರಿಕೊಂಡು ನಾವಿಬ್ಬರೂ ಬೈಕಿನಲ್ಲಿ ಊರಿಗೆ ಮರಳುತ್ತಿದ್ದೆವು. ಬೇಗ ಮನೆಸೇರಲು ಹೊಂಡದಿಣ್ಣೆಯಿಂದ ಕೂಡಿದ ಒಳದಾರಿಯಲ್ಲಿ ಸಾಗುತ್ತಿದ್ದೆವು. ಮಳೆಯೂ ಜೋರಾಗಿ ಸುರಿಯುತ್ತಿತ್ತು. ಅಕಸ್ಮಾತ್ತಾಗಿ ಎದುರುಬಂದ ಬೀದಿ ನಾಯಿಯನ್ನು ತಪ್ಪಿಸಲು ಹೋಗಿ ಬೈಕ್ ಚಲಾಯಿಸುತ್ತಿದ್ದ್ದ ನನ್ನ ಹತೋಟಿ ತಪ್ಪಿ ಇಬ್ಬರೂ ಬೈಕ್ ಸಮೇತ ಕೆಳಗೆ ಹೊಂಡಕ್ಕೆ ಉರುಳಿದೆವು. ಹೆಲ್ಮೆಟ್ ಧರಿಸಿದ್ದ ನಾನು ಚಿಕ್ಕಪುಟ್ಟ ಗಾಯಗಳಿಂದ ಪಾರಾದರೂ ಅಣ್ಣನ ತಲೆಗೆ ಏಟು ಬಿದ್ದು ಅವನು ಸ್ಥಳದಲ್ಲಿಯೇ ಮೃತಪಟ್ಟ. ತುಂಬಿದ ಬಸುರಿ ಅತ್ತಿಗೆಯನ್ನು ಸಮಾಧಾನಿಸುವುದೇ ಕಷ್ಟವಾಯಿತು. ಅಪ್ಪ, ಅಮ್ಮನೂ ಅಣ್ಣನನ್ನು ಕಳೆದುಕೊಂಡು ಮಂಕಾಗಿಬಿಟ್ಟಿದ್ದಾರೆ. ಈಗ ಅಪ್ಪನ ಮುಖವನ್ನೇ ನೋಡದ ಅಣ್ಣನ ಮಗುವಿನ ನಗು ಅವರ ಬಾಳನ್ನು ಸಹ್ಯವಾಗಿಸಿದೆ ಅಷ್ಟೇ. ಆದರೆ ಅತ್ತಿಗೆಯ ಕಣ್ಣಿನ ನೀರಿನ್ನೂ ಮಾಸಿಲ್ಲ. ಅವಳು ನನಗಿಂತಲೂ ಆರು ತಿಂಗಳು ಚಿಕ್ಕವಳು. ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ಅವಳ ಈ ಒಂಟಿಬಾಳಿಗೆ ನಾನೇ ಕಾರಣನಾದೆನೋ ಅನ್ನುವ ನೋವೂ ನನ್ನನ್ನು ಕಾಡುತ್ತಿದೆ. ಈಗ ಕೆಲವುದಿನಗಳಿಂದ ಒಂದು ವಿಚಾರ ನನ್ನ ತಲೆಯಲ್ಲಿ ತಿರುಗುತ್ತಿದೆ. ನಾನು ಅವಳನ್ನೇ ಮದುವೆಯಾಗಿ ಅವಳ ಬಾಳಿಗೆ ಬೆಳಕಾದರೆ ತಪ್ಪಿದೆಯಾ? ಸಂಪ್ರದಾಯಸ್ಥರಾದ ನಮ್ಮ ಕುಟುಂಬ ಈ ಮದುವೆಗೆ ಒಪ್ಪಿಗೆ ನೀಡಬಹುದೇ? ನನ್ನ ಈ ಇರಾದೆ ಧರ್ಮಸಮ್ಮತವೇ? ಅದೂ ಅಲ್ಲದೇ ನನ್ನ ಈ ವಿಚಾರಕ್ಕೆ ಅತ್ತಿಗೆಯ ಪ್ರತಿಕ್ರಿಯೆ ಹೇಗಿರಬಹುದು? 

ಉ : ನಿಮ್ಮ ಇರಾದೆಯೇನೋ ಸರಿಯಾಗಿಯೇ ಇದೆ. ಆದರೆ ಇಷ್ಟು ಜಲ್ದೀ ಬೇಡವೇನೋ. ಕನಿಷ್ಠ ಇನ್ನೂ ಒಂದಾರು ತಿಂಗಳಾದರೂ ಕಾಯಿರಿ. ಮೊದಲು ನೀವು ನಿಮ್ಮ ಮನೆಯವರೆಲ್ಲರನ್ನೂ ಹೇಗೆ ಆ ನೋವಿನಿಂದ ಹೊರತರುವುದು ಅನ್ನುವ ಕಡೆ ಗಮನ ಕೊಡಿ. ಅತ್ತಿಗೆಯ ಮನಃಸ್ಥಿತಿಯೂ ಒಂದು ತಹಬಂದಿಗೆ ಬರಲಿ. ಒಂಟಿಯಾಗಿ ಬಾಳುತ್ತಿರುವ ಅವಳಿಗೆ ಮೊದಲು ಸ್ನೇಹಹಸ್ತ ಚಾಚಿ. ಇಷ್ಟುದಿನ ಅವಳು ನಿಮ್ಮನ್ನು ಗಂಡನತಮ್ಮನ ದೃಷ್ಟಿಯಲ್ಲಿ ಮಾತ್ರ ನೋಡಿದ್ದಳೇ ವಿನಃ ಬೇರೆ ರೀತಿಯಲ್ಲಿ ಅಲ್ಲ. ಅದೂ ಅಲ್ಲದೇ ನಿಮ್ಮ ಅಣ್ಣನ ನೆನಪಿಂದ ಹೊರಬರುವುದೂ ಅವಳಿಗೆ ಅಷ್ಟು ಸುಲಭವಲ್ಲ. ಮೊದಲು ನಿಮ್ಮ ಅಪ್ಪ, ಅಮ್ಮನಿಗೆ ನಿಮ್ಮ ಈ ನಿರ್ಧಾರ ತಿಳಿಸಿ. ಅತ್ತಿಗೆಯ ನೋವನ್ನು ಕಣ್ಣಾರೆ ಕಾಣುತ್ತಿರುವ ಅವರ ಅಂತರಂಗವೂ ಈ ವಿಚಾರವನ್ನು ಒಪ್ಪಬಹುದು. ಮೊಮ್ಮಗುವಿಗೂ ಅಪ್ಪನ ಆಸರೆ ಸಿಕ್ಕಂತೆ ಆಗುತ್ತದೆ ಅಂತ ಸಂಪ್ರದಾಯಸ್ಥರಾದರೂ ಮಾನವೀಯತೆ ಮೆರೆಯಬಹುದು. ಅವರೇ ಸೊಸೆಗೆ ಈ ಮದುವೆಗೆ ಒಪ್ಪುವಂತೆ ಹೇಳಬಹುದು. ಆದರೆ ಅವಳಿಗೆ ಸಾಕಷ್ಟು ಸಮಯ ಕೊಡಿ. ಮಾನವ ಧರ್ಮ ಎಲ್ಲಕ್ಕಿಂತಲೂ ಮಿಗಿಲಾದ್ದರಿಂದ ನಿಮ್ಮ ಈ ವಿಚಾರಕ್ಕೆ ಎಲ್ಲರೂ ಕೊನೆಗೆ ತಲೆಬಾಗಲೇಬೇಕು. ಈಗಿನ ಪೀಳಿಗೆಗೆ ನೀವು ಆದರ್ಶರಾಗುತ್ತೀರಿ. ಶುಭವಾಗಲಿ.