ದಲಿತರ ಅನುದಾನದಲ್ಲಿ ಆರ್ಕಿಟೆಕ್ಟ್, ಅಧಿಕಾರಿಗಳ ಮಾರಿಹಬ್ಬ

ನಗರದ ಉರ್ವಾಸ್ಟೋರಿನಲ್ಲಿ ನಿರ್ಮಿಸಲಾಗುತ್ತಿರುವ 562 ಸೀಟಿನ ಅಂಬೇಡ್ಕರ್ ಭವನಕ್ಕೆ 10 ಕೋಟಿ ರೂ ವೆಚ್ಚ !

ವಿಶೇಷ ವರದಿ

ಮಂಗಳೂರು : ನಗರದಲ್ಲೊಂದು ಅಂಬೇಡ್ಕರ್ ಭವನ ನಿರ್ಮಿಸುವ ಮೂರು ದಶಕಗಳ ಹಿಂದಿನ ಕನಸು ಕೊನೆಗೂ ಸಾಕಾರಗೊಳ್ಳುತ್ತಿದ್ದರೂ, ಹನ್ನೆರಡು ಕೋಟಿ ರೂಪಾಯಿ ವಿನಿಯೋಗಿಸಿ ಇಂತಹ ಕಟ್ಟಡ ನಿರ್ಮಿಸಬೇಕಾಗಿದೆಯೇ ಎಂಬ ಚರ್ಚೆ ಆರಂಭವಾಗಿವೆ.

ನಗರದ ಉರ್ವಸ್ಟೋರಿನಲ್ಲಿ ನಿರ್ಮಾಣವಾಗಲಿರುವ ಅಂಬೇಡ್ಕರ್ ಭವನದ ವಾಸ್ತು ವಿನ್ಯಾಸ ಸ್ಥಳೀಯ, ಅಂತಾರಾಷ್ಟ್ರೀಯ ಅಥವಾ ಭವ್ಯವಾದ ಸ್ವರೂಪವನ್ನು ಹೊಂದಿಲ್ಲ ಎಂದೂ ಮಾತ್ರವಲ್ಲದೆ, ಹತ್ತು ಕೋಟಿ ರೂಪಾಯಿಯಷ್ಟು ದೊಡ್ಡ ಮೊತ್ತದ ಅನುದಾನವನ್ನು ವಿನಿಯೋಗಿಸಿ ನಿರ್ಮಿಸಲಾಗುವ ಸೌಲಭ್ಯಗಳು ಕೂಡ ಅಷ್ಟಕಷ್ಟೇ.

ಸದ್ಯ ಕಟ್ಟಡ ನಿರ್ಮಾಣ ಟೆಂಡರ್ ಕರೆಯಲಾದ ಮೊತ್ತ 9.15 ಕೋಟಿ ರೂ. ಕಟ್ಟಡ ಪ್ರಧಾನ ಉದ್ದೇಶ ಬೃಹತ್ ಸಭಾಂಗಣ. ಮೊದಲ ಮಹಡಿಯಲ್ಲಿರುವ ಮುಖ್ಯ ಸಭಾಂಗಣದಲ್ಲಿ ಕೇವಲ 562 ಮಂದಿಗೆ ಆಸೀನರಾಗಲು ಮಾತ್ರ ಸಾಧ್ಯ. ಇನ್ನು ಬಾಲ್ಕನಿ ಸಭಾಂಗಣದಲ್ಲಿ 152 ಆಸನಗಳ ವ್ಯವಸ್ಥೆ ಸೇರಿದಂತೆ ಒಟ್ಟು 714 ಮಂದಿಗೆ ಮಾತ್ರ ಈ ಒಟ್ಟು ಸಭಾಂಗಣದಲ್ಲಿ ಆಸೀನರಾಗಲು ಸಾಧ್ಯವಿದೆ. ಹತ್ತು ಲಕ್ಷ ಜನಸಂಖ್ಯೆ ಇರುವ ಮಂಗಳೂರು ನಗರದಲ್ಲಿ ನಿರ್ಮಿಸಲಾಗುವ ಸಭಾಂಗಣದಲ್ಲಿ ಕನಿಷ್ಟ ಒಂದು ಸಾವಿರ ಮಂದಿ ಆಸೀನರಾಗಲು ಸಾಧ್ಯವಾಗದಿದ್ದರೆ ಅಂತಹ ಯೋಜನೆಯನ್ನು ಕಾರ್ಯಗತ ಮಾಡುವ ಮೂಲಕ ಸರಕಾರ ಏನು ಸಾಧಿಸಿದಂತಾಗುತ್ತದೆ ಎಂಬ ಪ್ರಶ್ನೆ ಎದ್ದಿದೆ.

ಬಹುತೇಕ ಪರಿಶಿಷ್ಟ ಪಂಗಡ ಮತ್ತು ಜಾತಿಯವರಿಗೆ ಹಾಗೂ ಇತರರಿಗೆ ಬಳಸಲು ಸಾಧ್ಯವಾಗುವ ಸಭಾಂಗಣದಲ್ಲಿ ಕನಿಷ್ಟ ಒಂದು ಸಾವಿರ ಮಂದಿ ಆಸೀನರಾಗಲು ವ್ಯವಸ್ಥೆ ಇರಬೇಕಾಗಿತ್ತು. ಏಕೆಂದರೆ, ಸರಕಾರ ಜನರ ತೆರಿಗೆಯ ಹಣವನ್ನು ದಲಿತರ ಹೆಸರಿನಲ್ಲಿ ಪೆÇೀಲು ಮಾಡುತ್ತಿದೆ ಎಂಬ ಸಂದೇಶ ರವಾನೆ ಆಗಲಿದೆ.

ಇನ್ನು ಕಟ್ಟಡ ವಾಸ್ತು ವಿನ್ಯಾಸ ನಗರದಲ್ಲಿ ಧರ್ಮರಾಜ್ ಎಂಬಾತ ಸೃಷ್ಟಿಸುವ ಮಾಲ್ ವಿನ್ಯಾಸಗಳಿಗಿಂತಲೂ ಕಳಪೆಯಾಗಿದೆ. ಅಂಬೇಡ್ಕರ್ ಭವನದ ವಾಸ್ತು ವಿನ್ಯಾಸ ಮಾಡಿದವರು ಉಡುಪಿಯ ಎಜಿ ಅಸೋಸಿಯೇಟ್ಸ್ ಎಂದು ಆಮಂತ್ರಣ ಪತ್ರದಲ್ಲಿ ನಮೂದಿಸಲಾಗಿದೆ.

ಮೂರು ಸೆಂಟ್ಸ್ ಜಮೀನಿನಲ್ಲಿ ಎರಡು ಸಿಂಗಲ್ ಬೆಡ್ ರೂಮ್ ಮನೆ ನಿರ್ಮಿಸುವ ಅನುಭವ ಇರುವ ಕರ್ನಾಟಕ ಗೃಹ ಮಂಡಳಿ ಈ ಯೋಜನೆಯ ನಿರ್ಮಾಣ ಮತ್ತು ನಿರ್ವಹಣೆ ವಹಿಸಿಕೊಂಡಿರುವುದರಿಂದ ಹೆಚ್ಚೇನೂ ನಿರೀಕ್ಷಿಸುವುದರಲ್ಲಿ ಅರ್ಥವಿಲ್ಲ. ಇನ್ನು ನಮ್ಮ ದಲಿತ ಮುಖಂಡರಿಗಾಗಲಿ, ದಲಿತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುವ ಜಿಲ್ಲೆಯ ಸಚಿವ, ಶಾಸಕರಿಗೆ ಇತ್ತ ಗಮನ ಹರಿಸಲು ಸಮಯವಾದರೂ ಎಲ್ಲಿದೆ ?

ಇಂದಿನ ಜಿಲ್ಲಾ ಉಸ್ತುವಾರಿ ಸಚಿವರು ಮೊದಲ ಬಾರಿ ಶಾಸಕರಾದಾಗಲೇ ಹುಟ್ಟಿಕೊಂಡ ಯೋಜನೆ ಅಂಬೇಡ್ಕರ್ ಭವನ. ಮೊದಲೇ ಪರಿಶಿಷ್ಟರು ಎಂದರೆ ಒಳಗೊಳಗೆ ಮೂಗು ಮುರಿಯುವ ಮನೋಸ್ಥಿತಿ ಹೊಂದಿರುವ ಕರಾವಳಿ ಜಿಲ್ಲೆಯ ಜನಪ್ರತಿನಿಧಿಗಳು ಇರುವಾಗ ಕೊನೆಗೂ ಅಂಬೇಡ್ಕರ್ ಭವನ ನಿರ್ಮಾಣವಾಗಲೇ ಇಲ್ಲ. ಈಗ ಕಾಲ ಕೂಡಿ ಬಂದರೂ ಒಂದು ಮನಮೋಹಕ ವಿನ್ಯಾಸದ ಹಾಗೂ ಸಾರ್ವಜನಿಕರಿಗೆ ಸದುಪಯೋಗ ಆಗಬಹುದಾದ ಕಟ್ಟಡ ನಿರ್ಮಾಣ ಆಗುತ್ತಿಲ್ಲ ಎಂಬುದು ವಿಪರ್ಯಾಸ. ಸಮಾಜ ಕಲ್ಯಾಣ ಸಚಿವ ಆಂಜನೇಯ ಅವರು ಇತ್ತ ಗಮನ ಹರಿಸುವ ಅಗತ್ಯವಿದೆ.