ಬನವಾಸಿಯಲ್ಲಿ ಪಂಪ ವಿವಿ ಸ್ಥಾಪನೆಯಾಗಲಿ

ಅರವಿಂದ ಕರ್ಕಿಕೋಡಿ

ನಮ್ಮ ಪ್ರತಿನಿಧಿ ವರದಿ

ಶಿರಸಿ “ಕನ್ನಡದ ಮೊದಲ ರಾಜಧಾನಿ ಬನವಾಸಿಯನ್ನು ಎಲ್ಲ ದೃಷ್ಟಿಕೋನಗಳಿಂದ ಅಭಿವೃದ್ಧಿಪಡಿಸುವ ಹಿನ್ನೆಲೆಯಲ್ಲಿ ಚಿಂತನೆ ಮಾಡುವುದರೊಟ್ಟಿಗೆ ಇಲ್ಲಿನ ನವಣಗೇರಿಯಲ್ಲಿ ಲಭ್ಯವಿರುವ 200 ಎಕರೆ ನಿವೇಶನ ಬಳಸಿಕೊಂಡು ಪಂಪನ ವಿಶ್ವವಿದ್ವಾನಿಲಯ ಹಾಗೂ ಸಾಹಿತ್ಯಿಕ, ಐತಿಹಾಸಿಕ, ಸಾಂಸ್ಕøತಿಕ ಅಧ್ಯಯನ ಕೇಂದ್ರವನ್ನು ಸ್ಥಾಪಿಸುವ ನಿರ್ಣಯಕ್ಕೆ ಬಂದರೆ ಅರ್ಥಪೂರ್ಣ ಪ್ರಕ್ರಿಯೆಗೆ ಚಾಲನೆ ಸಿಕ್ಕಂತಾಗುತ್ತದೆ” ಎಂದು ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಅರವಿಂದ ಕರ್ಕಿಕೋಡಿ ಹೇಳಿದರು.

ಅವರು ರವಿವಾರ ಬನವಾಸಿಯಲ್ಲಿ ನಡೆದ ಕದಂಬೋತ್ಸವದಲ್ಲಿ ಬನವಾಸಿ ಅಭಿವೃದ್ಧಿ ಚಿಂತನಗೋಷ್ಠಿಯಲ್ಲಿ ವಿಷಯ ಮಂಡನೆ ಮಾಡಿ ಮಾತನಾಡುತ್ತ, “ಕೇವಲ ರಸ್ತೆ, ಸೇತುವೆ, ನೀರು ಮಾಡಿದರೆ ಈ ಪಂಪನ ನೆಲ ಅಭಿವೃದ್ಧಿ ಆಗದು. ಇಲ್ಲಿಯ ಸೆಲೆಯಾದ ಪಂಪನ ಕಾವ್ಯ, ರಾಜವಂಶ ಇವೆಲ್ಲವನ್ನು ಗಮನದಲ್ಲಿಟ್ಟುಕೊಂಡು ಇದನ್ನು ಪ್ರವಾಸಿಕೇಂದ್ರವಾಗಿಯೂ ರೂಪಿಸಬೇಕಾಗಿದೆ. ಅತ್ತಿವೇರಿಯಂಥ ಪಕ್ಷಿಧಾಮ, ಆಕರ್ಷಕ ಹೂಬನ ಇತ್ಯಾದಿಗಳನ್ನೂ ಜನಾಕರ್ಷಣೆಯನ್ನಾಗಿ ಮಾಡುವುದು ಅಗತ್ಯ” ಎಂದು ಅಭಿಪ್ರಾಯಪಟ್ಟರು.
“ಇಲ್ಲಿ ಬನವಾಸಿಯ ಐತಿಹ್ಯ ಮತ್ತು ಸಾಹಿತ್ಯಗಳಿಗೆ ಪೂರಕವಾದ ಡಿಜಿಟಲೀಕರಣಗಳನ್ನೊಳಗೊಂಡ ರಾಜ್ಯಮಟ್ಟದ ಗ್ರಂಥಾಲಯವನ್ನು ಆರಂಭಿಸಬೇಕು. ಅಲ್ಲದೇ ರಾಜ್ಯದ ಆಯ್ದ ವಿದ್ಯಾರ್ಥಿಗಳಿಗೆ ಮತ್ತು ಇತಿಹಾಸ ಹಾಗೂ ಕನ್ನಡ ಕಾಲೇಜು ಉಪನ್ಯಾಸಕರಿಗೆ ಕಾಲಾವಧಿಯ ಶಿಬಿರ, ಕಮ್ಮಟಗಳನ್ನು ವರ್ಷವಿಡೀ ಹಮ್ಮಿಕೊಳ್ಳುವಂತಾಗಬೇಕು” ಎಂದು ತಿಳಿಸಿದರು.

“ಬೆಂಗಳೂರಿನಿಂದ ಮತ್ತು ಉತ್ತರ ಕರ್ನಾಟಕದ ತುತ್ತತುದಿಯಿಂದ ಬನವಾಸಿಗೆ ಕ್ರಮವಾಗಿ ಒಂದೊಂದಾದರೂ ಬಸ್ಸು ಬಿಡುವ ವ್ಯವಸ್ಥೆಯಾದರೆ ಜನರಿಗೆ ಬಂದು ಹೋಗಲು ಅನುಕೂಲವಾಗುತ್ತದೆ. ಬನವಾಸಿ ಮಾರ್ಗದಲ್ಲಿ ಪಂಪನ ಧ್ಯೇಯವಾಕ್ಯ `ಮಾನವ ಜಾತಿ ತಾನೊಂದೇ ವಲಂ’ ಎಂಬ ಸಾಲುಗಳೊಂದಿಗೆ ಹೆಬ್ಬಾಗಿಲು ನಿರ್ಮಿಸುವುದರ ಜೊತೆಗೆ ಬನವಾಸಿಯ ಕೇಂದ್ರ ಸ್ಥಳದಲ್ಲಿ ಕನ್ನಡದ ಮೊದಲ ರಾಜಧಾನಿ ಬನವಾಸಿ ಎಂದು ಹೆಸರಿನ ಫಲಕವನ್ನೂ ಹಾಕಿದರೆ ಜನ ಈ ಪ್ರದೇಶವನ್ನು ಗಂಭೀರವಾಗಿ ಪರಿಗಣಿಸುತ್ತಾರೆ” ಎಂದರು.
ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಉದಯ ಕಾನಳ್ಳಿ, “ಇಲ್ಲಿನ ಹಣ್ಣು-ಹಂಪಲುಗಳನ್ನು ಹೊರ ರಾಜ್ಯ, ಹೊರ ರಾಷ್ಟ್ರಗಳಿಗೆ ರಫ್ತಾಗುವಂತೆ ಮಾಡಬೇಕು” ಎಂದರು.

ಅಧ್ಯಕ್ಷತೆ ವಹಿಸಿದ್ದ ಮಧುಕೇಶ್ವರ ದೇವಸ್ಥಾನದ ಧರ್ಮದರ್ಶಿ ಟಿ ಜಿ ನಾಡಿಗೇರ ಮಾತನಾಡಿ, “ಬನವಾಸಿ ಪ್ರಾಧಿಕಾರ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುವಂತಾಗಲಿ. ಅರಣ್ಯ ಇಲಾಖೆಗೆ ಸೇರಿದ ಬಹಳಷ್ಟು ಕಾಲಿ ಇದ್ದ ನಿವೇಶನವನ್ನು ಜಿಲ್ಲಾಧಿಕಾರಿಗಳು ಬನವಾಸಿ ಅಭಿವೃದ್ಧಿಗೆ ಬಳಕೆಯಾಗುವಂತೆ ಅವಕಾಶ ಮಾಡಿಕೊಡಬೇಕು” ಎಂದು ವಿನಂತಿಸಿದರು. ಜಿಲ್ಲಾಧಿಕಾರಿ ಎಸ್ ಎಸ್ ನಕುಲ್, ಅಪರ ಜಿಲ್ಲಾಧಿಕಾರಿ ಪ್ರಸನ್ನ, ಶಿರಸಿ ಉಪವಿಭಾಗಾಧಿಕಾರಿ ರಾಜು ಮೊಗವೀರ ಉಪಸ್ಥಿತರಿದ್ದರು. ಸ್ಥಳೀಯ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಎಸ್ ಕೆ ಅಕ್ಕಿ ಕಾರ್ಯಕ್ರಮ ನಿರ್ವಹಿಸಿದರು.
ಓಕೆ