ವಾರದೊಳಗೆ ಲಿಂಗ ಅಲ್ಪಸಂಖ್ಯಾತರಿಗೆ ಸಂಬಂಧಿಸಿದ ಸ್ಪಷ್ಟ ಅರ್ಜಿಗಳು ಸರ್ಕಾರಿ ಕಚೇರಿಗಳಲ್ಲಿ ಲಭ್ಯ : ಸಚಿವ ಪ್ರಮೋದ್

 ನಮ್ಮ ಪ್ರತಿನಿಧಿ ವರದಿ

ಉಡುಪಿ : ಸರ್ಕಾರಿ ಯೋಜನೆಗಳು ಫಲಾನುಭವಿಗಳಿಗೆ ತಲುಪುತ್ತಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವಂತೆ ರಾಜ್ಯ ಮೀನುಗಾರಿಕೆ, ಯುವಶಕ್ತಿ ಮತ್ತು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಸರ್ಕಾರಿ ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ.

ಅವರು ಉಡುಪಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಲಿಂಗ ಅಲ್ಪಸಂಖ್ಯಾತರಿಗೆ ಅಭಿವೃದ್ಧಿ ಕ್ರಮಗಳು ಜಾರಿಗೊಳಿಸುವ ಕುರಿತು ನಡೆದ ಸಭೆಯಲ್ಲಿ ಮಾತನಾಡಿ, “ಒಂದು ವಾರದೊಳಗೆ ಎಲ್ಲಾ ಸರ್ಕಾರಿ ಇಲಾಖೆಗಳಲ್ಲಿ ಲಿಂಗ ಅಲ್ಪಸಂಖ್ಯಾತರಿಗೆ ಸಂಬಂಧಿಸಿದ ಅರ್ಜಿಗಳು ಲಭ್ಯವಿರಬೇಕು” ಎಂದು ಆದೇಶಿಸಿದರು. “ರಾಜ್ಯ ಸರ್ಕಾರ ಈಗಾಗಲೇ ಲಿಂಗ ಅಲ್ಪಸಂಖ್ಯಾತರಿಗೆ ಹಲವು ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸಿದೆ. ಈ ಯೋಜನೆಗಳ ಸಮರ್ಪಕ ಜಾರಿಯಿಂದ ಸಮಾಜದಲ್ಲಿ ಅವರಲ್ಲಿರುವ ತಾರತಮ್ಯ ಮತ್ತು ಪ್ರತ್ಯೇಕತಾ ಭಾವನೆ ದೂರ ಆಗಲು ಸಹಾಯವಾಗುತ್ತದೆ. ಇದರಿಂದ ಅವರಲ್ಲಿ ಆತ್ಮವಿಶ್ವಾಸ ಕೂಡ ಹೆಚ್ಚಾಗುತ್ತದೆ” ಎಂದು ಅವರು ಹೇಳಿದ್ದಾರೆ.

ಸರ್ಕಾರಿ ಸೌಲಭ್ಯಗಳಾದ ಮೈತ್ರಿ, ಸ್ವುದ್ಯೋಗ ಮತ್ತು ಮನೆ ಯೋಜನೆ ಮೊದಲಾದುವುಗಳಲ್ಲಿ ಜಿಲ್ಲೆಯಲ್ಲಿ ಪ್ರಯೋಜನ ಪಡೆದುಕೊಂಡಿರುವ ಲಿಂಗ ಅಲ್ಪಸಂಖ್ಯಾತರು ಕೇವಲ ಕೆಲವೇ ಮಂದಿಯಷ್ಟೆ ಎಂದು ಸಾಮಾಜಿಕ ಸೇವಾಕರ್ತ ಸಂಜೀವ್ ವಂಡ್ಸೆ ಹೇಳಿದರು.

ಅರ್ಹ ಫಲಾನುಭವಿಗಳಿಗೆ ಈ ಯೋಜನೆಗಳ ಸೌಲಭ್ಯವನ್ನು ಒದಗಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

ವಿವಿಧ ಇಲಾಖೆಗಳಿಗೆ ಕಾಂಟ್ರಾಕ್ಟ್ ಆಧಾರದಲ್ಲಿ ಕೆಲಸಗಾರರನ್ನು ನೇಮಕಗೊಳಿಸುವ ಸಂದರ್ಭ ಲಿಂಗ ಅಲ್ಪಸಂಖ್ಯಾತರಿಗೆ ಅವಕಾಶ ನೀಡುವಂತೆ ಸಚಿವರು ಜಿಲ್ಲಾಧಿಕಾರಿ ಪ್ರಿಯಾಂಕಾರಿಗೆ ಹೇಳಿದರು.