ಲವ್ ಜಿಹಾದ್ : ಎನ್ಐಎ ತನಿಖೆಗೆ ತಡೆಯಾಜ್ಞೆ ನೀಡುವಂತೆ ಸುಪ್ರೀಂಗೆ ಅರ್ಜಿ

ರಾಷ್ಟ್ರೀಯ ವಿವಾದವಾಗಿರುವ ಮುಸ್ಲಿಂ ಮತ್ತು ಹಿಂದೂ ಮಹಿಳೆಯ ವಿವಾಹ ಪ್ರಕರಣದಲ್ಲಿ, ಅಖಿಲಾರನ್ನು ಮದುವೆಯಾದ ಕೇರಳದ ಮುಸ್ಲಿಂ ವ್ಯಕ್ತಿ ರಾಷ್ಟ್ರೀಯ ತನಿಖಾ ಸಂಸ್ಥೆ ತಮ್ಮ ವಿವಾಹವನ್ನು ತನಿಖೆ ನಡೆಸುತ್ತಿರುವುದಕ್ಕೆ ತಡೆಯಾಜ್ಞೆ ನೀಡುವಂತೆ ಸುಪ್ರೀಂಕೋರ್ಟ್ ಮುಂದೆ ಬೇಡಿಕೆ ಇಟ್ಟಿದ್ದಾರೆ.ಅರ್ಜಿಯಲ್ಲಿ ಶಾಫಿನ್ ಜಹಾನ್ ಅವರು ಪತ್ನಿ ಹಾದಿಯಾ (ಅಖಿಲಾ) ತನ್ನ ಸ್ವಂತಕುಟುಂಬದಿಂದ ದೈಹಿಕ ಮತ್ತು ಮಾನಸಿಕ ದಾಳಿಯನ್ನು ಎದುರಿಸುತ್ತಿದ್ದಾರೆ. ಅಲ್ಲದೆ ಸಾಮಾಜಿಕ ಕಾರ್ಯಕರ್ತರನ್ನು ಭೇಟಿಯಾಗಲೂ ಆಕೆಗೆ ಅವಕಾಶ ಕೊಡುತ್ತಿಲ್ಲ ಎಂದು ಆರೋಪಿಸಿದ್ದಾರೆ. ವಿಚಾರಣೆಯು ನಿವೃತ್ತ ನ್ಯಾಯಾಧೀಶರ ಮೇಲ್ವಿಚಾರಣೆಯಲ್ಲಿ ನಡೆಯಬೇಕೆನ್ನುವ ನ್ಯಾಯಾಲಯದ ಆದೇಶವನ್ನು ಅಲಕ್ಷಿಸಲಾಗಿದೆ ಎಂದೂ ಅವರು ಹೇಳಿದ್ದಾರೆ.

“ಕುಟುಂಬದವರು ಅಖಿಲಾರನ್ನು ಕೋಣೆಯಲ್ಲಿ ಕೂಡಿ ಹಾಕಿದ್ದಾರೆ. ಸಂಬಂಧಿಕರೇ ಆಕೆಯ ಮೇಲೆ ದೈಹಿಕ ಮತ್ತು ಮಾನಸಿಕ ದೌರ್ಜನ್ಯ ಎಸಗುತ್ತಿದ್ದಾರೆ. ಕೆಲವು ಸಂಘಪರಿವಾರದ ಸಂಘಟನೆಗಳು ಆಕೆಯನ್ನು ಬೆದರಿಸಲು ಪ್ರಯತ್ನಿಸುತ್ತಿವೆ” ಎಂದು ಜಹಾನ್ ಹೇಳಿದ್ದಾರೆ. ಸುಪ್ರೀಂಕೋರ್ಟ್ ನಿರ್ಧಾರಕ್ಕೆ ಬರುವ ಮೊದಲು ಅಖಿಲಾಳ ಅಭಿಪ್ರಾಯಪಡೆಯಬೇಕು ಎಂದೂ ಬೇಡಿಕೆ ಇಟ್ಟಿದ್ದಾರೆ. ಕಳೆದವರ್ಷ ಹೋಮಿಯೋಪತಿ ವೈದ್ಯೆ ಅಖಿಲಾ ಅಶೋಕನ್ ಇಸ್ಲಾಂಗೆ ಮತಾಂತರಗೊಂಡ ಮೇಲೆ ಪ್ರಕರಣ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು. ಅಖಿಲಾ ಮತ್ತು ಜಹಾನ್ ಡಿಸೆಂಬರಿನಲ್ಲಿ ಮದುವೆಯಾಗಿದ್ದರು. ಮಾಜಿ ಸೇನಾಧಿಕಾರಿಯಾದ ಅಖಿಲಾರ ತಂದೆ ಕೇರಳ ಹೈಕೋರ್ಟಿನಲ್ಲಿ ಮಗಳನ್ನು ಒತ್ತಡಪೂರ್ವಕ ಮತಾಂತರಗೊಳಿಸಲಾಗಿದೆ ಎಂದು ದೂರು ನೀಡಿದ್ದರು. ಆಕೆಯನ್ನು ಸಿರಿಯಾ ಅಥವಾ ಅಫ್ಘಾನಿಸ್ತಾನಕ್ಕೆ ಕಳುಹಿಸಿ ಇಸ್ಲಾಮಿಕ್ ಸ್ಟೇಟ್ ಜೊತೆಗೆ ಸೇರಿಸಲಾಗುತ್ತಿದೆ ಎಂದೂ ಆರೋಪಿಸಿದ್ದರು.

ಮೇನಲ್ಲಿ ನ್ಯಾಯಾಲಯವು ಮದುವೆಯನ್ನು ತಳ್ಳಿ ಹಾಕಿದ ಮೇಲೆ ಸುಪ್ರೀಂಕೋರ್ಟ್ ಕೂಡ ಹೈಕೋರ್ಟ್ ಆದೇಶವನ್ನೇ ಅಂಗೀಕರಿಸಿ ರಾಷ್ಟ್ರೀಯ ತನಿಖಾ ಸಂಸ್ಥೆಯ ವಿಚಾರಣೆಗೆ ಆದೇಶಿಸಿತ್ತು. ಆದರೆ ಕೆಲವೇ ವಾರಗಳಲ್ಲಿ ತನಿಖೆಯ ನೇತೃತ್ವ ವಹಿಸಬೇಕಾಗಿದ್ದ ನ್ಯಾಯಮೂರ್ತಿ ಟಿ ಕೆ ರಾವೇಂದ್ರನ್ ವೈಯಕ್ತಿಕ ಕಾರಣ ನೀಡಿ ಜವಾಬ್ದಾರಿಯಿಂದ ನುಣುಚಿಕೊಂಡರು.

“ನನ್ನನ್ನು ಭಯೋತ್ಪಾದಕನೆಂದು ಹಣೆಪಟ್ಟಿ ಕಟ್ಟಲು ಬಹಳ ಪ್ರಯತ್ನಗಳು ನಡೆದಿವೆ. ಮುಂದಿನ ದಿನಗಳಲ್ಲಿ ನನ್ನ ಮೇಲೆ ಅಂತಹ ಹಲವು ಆರೋಪಗಳು ಬರಲಿವೆ” ಎಂದು ಜಹಾನ್ ಹೇಳಿದ್ದಾರೆ.