ಮುಲ್ಕಿ ಹೆದ್ದಾರಿ ಕಾಮಗಾರಿ ವಿಳಂಬ : ರಾಜಕೀಯರಹಿತ ಪ್ರತಿಭಟನೆಗೆ ಸಿದ್ಧತೆ

ಸಭೆ ಬಳಿಕ ಸ್ಥಾಯಿ ಸಮಿತಿಗೆ ಅಧ್ಯಕ್ಷ ಹರ್ಷರಾಜ್ ಶೆಟ್ಟಿಗೆ ಅಭಿನಂದಿಸಲಾಯಿತು

ನಮ್ಮ ಪ್ರತಿನಿಧಿ ವರದಿ

ಮುಲ್ಕಿ : ಕೆಲ ತಿಂಗಳಿನಿಂದ ಮುಲ್ಕಿ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಚತುಷ್ಪಥ ಕಾಮಗಾರಿ ನಡೆಸುತ್ತಿರುವ ಕಂಪನಿ ಕಳೆದ ಮಳೆಗಾಲದಿಂದ ಕಾಮಗಾರಿ ಸ್ಥಗಿತಗೊಳಿಸಿದೆ. ಈ ಬಗ್ಗೆ ಅನೇಕ ಬಾರಿ ಕಂಪನಿಯ ಗಮನ ಸೆಳೆದರೂ ಕಂಪನಿ ನಿರ್ಲಕ್ಷ್ಯ ವಹಿಸುತ್ತಿದೆ. ತಕ್ಷಣ ಕಾಮಗಾರಿ ಮುಂದುವರಿಸದಿದ್ದರೆ ಮುಂದಿನ ದಿನಗಳಲ್ಲಿ ರಾಜಕೀಯರಹಿತ ಪ್ರತಿಭಟನೆ ನಡೆಸುವುದಾಗಿ ಮುಲ್ಕಿ ನಗರ ಪಂಚಾಯತ್ ಅಧ್ಯಕ್ಷ ಮಾಸಿಕ ಸಭೆಯಲ್ಲಿ ಹೇಳಿದ್ದು, ಇದನ್ನು ಪಂಚಾಯತ್ ಸದಸ್ಯರು ಅನುಮೋದಿಸಿದರು.

ನಗರ ಪಂಚಾಯತ್ ಸಭಾಂಗಣದಲ್ಲಿ ನಡೆದ ಮಾಸಿಕ ಸಭೆಯಲ್ಲಿ ನ ಪಂ ಅಧ್ಯಕ್ಷ ಸುನೀಲ್ ಆಳ್ವ ಈ ಬಗ್ಗೆ ಪ್ರಸ್ತಾವಿಸಿದರು.

“ನಗರ ಪಂಚಾಯತ್ ವ್ಯಾಪ್ತಿಯ ಬಸ್ ನಿಲ್ದಾಣ ಬಳಿ ಹೆದ್ದಾರಿ ಕಾಮಗಾರಿ ಕಳೆದ ಮಳೆಗಾಲದಿಂದ ಸ್ಥಗಿತಗೊಂಡಿದ್ದು, ಜನಸಾಮಾನ್ಯರಿಗೆ ತೀವ್ರ ತೊಂದರೆಯಾಗಿದೆ. ಈ ಬಗ್ಗೆ ಪಂಚಾಯತ್ ವತಿಯಿಂದ ಹೆದ್ದಾರಿ ಇಲಾಖೆ ಹಾಗೂ ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಇಲ್ಲಿ ಪದೇ ಪದೇ ಅಪಘಾತ ನಡೆಯುತ್ತಿದ್ದು, ರಸ್ತೆ ದಾಟುವುದೇ ದುಸ್ತರವಾಗಿದೆ. ಸರ್ವಿಸ್ ರಸ್ತೆ ಕಾಮಗಾರಿ ಅರ್ಧಕ್ಕೆ ನಿಂತ ಕಾರಣ ವಾಹನ ನಿಲುಗಡೆಗೂ ತೀವ್ರ ಸಮಸ್ಯೆಯಾಗಿದೆ. ಹಾಗಾಗಿ ತಕ್ಷಣ ಹೆದ್ದಾರಿ ಕಾಮಗಾರಿ ಮುಂದುವರಿಸದಿದ್ದಲ್ಲಿ ಹೆದ್ದಾರಿ ಕಾಮಗಾರಿ ವಹಿಸಿಕೊಂಡ ಕಂಪನಿ ವಿರುದ್ಧ ರಾಜಕೀಯರಹಿತ ಪ್ರತಿಭಟನೆ ನಡೆಸಲಾಗುವುದು” ಎಂದು ಅವರು ಹೇಳಿದರು.

ಮಲೇರಿಯಾ

ಲಿಂಗಪ್ಪಯ್ಯಕಾಡು ಪ್ರದೇಶದಲ್ಲಿ ಮಲೇರಿಯಾ ಕಾಯಿಲೆ ಇರುವ ಬಗ್ಗೆ ಮುಲ್ಕಿ ಸಮುದಾಯ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಶಕುಂತಳಾ ಮಾಹಿತಿ ನೀಡಿ, “ಅಲ್ಲಿನ ಒಳಚರಂಡಿ ವ್ಯವಸ್ಥೆ ಸರಿಪಡಿಸುವಂತೆ ಮನವಿ ಮಾಡಿದರು. ಡಿಸೆಂಬರ್ ತಿಂಗಳಲ್ಲಿ 310 ಮಂದಿ ರಕ್ತ ಪರೀಕ್ಷೆ ಮಾಡಿಸಿದ್ದು, ಈ ಪೈಕಿ 43 ಮಂದಿಗೆ ಮಲೇರಿಯಾ ಕಾಣಿಸಿಕೊಂಡಿದೆ. ಇದರಲ್ಲಿ 24 ಮಂದಿ ಲಿಂಗಪ್ಪಯ್ಯಕಾಡು ಪ್ರದೇಶದವರು. ಜನವರಿ ತಿಂಗಳಲ್ಲಿ 190 ರಕ್ತ ಪರೀಕ್ಷೆಯಲ್ಲಿ 14 ಮಲೇರಿಯಾ ಪೀಡಿತರು. ಈ ಪೈಕಿ 12 ಮಂದಿ ಲಿಂಗಪ್ಪಯ್ಯ ಕಾಡಿನವರು” ಎಂದವರು ಮಾಹಿತಿ ನೀಡಿದರು.

ಸಮುದಾಯ ಆರೋಗ್ಯ ಕೇಂದ್ರ ಮೇಲ್ದರ್ಜೆಗೇರಿದ ಕಡತ ಕಾಣೆಯಾದ ಬಗ್ಗೆ ವೈದ್ಯೆ ಶಕುಂತಳಾ ನಪಂ ಗಮನ ಸೆಳೆದು, ಈ ಬಗ್ಗೆ ಸಹಕರಿಸುವಂತೆ ಮನವಿ ಮಾಡಿದರು. ಕಡತ ಕಾಣೆಯಾದ ಕಾರಣ ಆಸ್ಪತ್ರೆಗೆ ಬರಬೇಕಿದ್ದ ವೈದ್ಯರನ್ನು ಹಿಂದಕ್ಕೆ ಕಳುಹಿಸಲಾಗಿದೆ ಎಂದರು.

ಸ್ಥಾಯಿ ಸಮಿತಿ

ನಗರ ಪಂಚಾಯತಿನ ಮುಂದಿನ ಒಂದು ವರ್ಷದ ಅವಧಿಯ ಸ್ಥಾಯಿ ಸಮಿತಿಗೆ ಅಧ್ಯಕ್ಷರ ಆಯ್ಕೆ ನಡೆದಿದ್ದು, ಹರ್ಷರಾಜ್ ಶೆಟ್ಟಿ ಜಿ ಎಮ್ ಅವಿರೋಧವಾಗಿ ಆಯ್ಕೆಯಾದರು.

ಚಕಮಕಿ

ನಗರ ಪಂಚಾಯತಿ ಮಾಸಿಕ ಸಭೆ ಬಳಿಕ ಬಿಜೆಪಿ ಸದಸ್ಯೆ ಹಾಗೂ ಮಾಜಿ ಅಧ್ಯಕ್ಷೆ ನಡುವೆ ಮಾತಿನ ಚಕಮಕಿ ನಡೆದಿದೆ. ಕೆ ಎಸ್ ರಾವ್ ನಗರ ವಾರ್ಡಿನ ಸದಸ್ಯೆ ಶಂಕ್ರವ್ವ ಅವರು ಮಾಜಿ ಅಧ್ಯಕ್ಷೆ ಮೀನಾಕ್ಷಿ ಬಂಗೇರಾ ತಮ್ಮ ಸಮಸ್ಯೆ ಸಭೆಯಲ್ಲಿ ಮಾತನಾಡದಂತೆ ನಿರ್ಬಂಧ ವಿಧಿಸಿದ್ದಾರೆ ಎಂದು ಆರೋಪಿಸಿದ್ದು, ಮಾತಿನ ಚಕಮಕಿ ನಡೆಸಿದರು. ಸಭೆಯಲ್ಲಿ ಮಾತನಾಡಲು ಬಿಡದಿದ್ದರೆ ಸದಸ್ಯ ಹುದ್ದೆಗೆ ರಾಜೀನಾಮೆ ನೀಡುತ್ತೇನೆ ಎಂದು ಶಂಕ್ರವ್ವ ಆಕ್ರೋಶ ವ್ಯಕ್ತಪಡಿಸಿ ಏರುಧ್ವನಿಯಲ್ಲಿ ಮಾತನಾಡಿದಾಗ ಇತರೆ ಸದಸ್ಯರು ಸಮಾಧಾನ ಮಾಡಿ ಕಳಿಸಿದರು.