ವೈದ್ಯರ ವೃತ್ತಿ ದೋಷಗಳ ಪತ್ತೆಗೆ ಪಕ್ಷಾತೀತ ವಿಶೇಷ ಸಂಘಟನೆ !

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಶಿರಸಿ : ತಾಲೂಕಿನಲ್ಲಿ ಕಾರ್ಯನಿರ್ವಹಿಸುವ ಖಾಸಗಿ ವೈದ್ಯರ ವೃತ್ತಿ ದೋಷಗಳು, ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಆಗುವ ತೊಂದರೆ, ದರ ಶೋಷಣೆ, ಇತರ ಸಮಸ್ಯೆಗಳ ಬಗ್ಗೆ ನಿಗಾ ಇಡುವ ಜತೆಗೆ ಅಗತ್ಯ ಬಿದ್ದರೆ ಜನಜಾಗೃತಿ ಮೂಡಿಸಲು ಪಕ್ಷಾತೀತವಾಗಿ ಸಮಾನಮನಸ್ಕರ ಸಂಘಟನೆಯೊಂದನ್ನು ಹುಟ್ಟುಹಾಕಲಾಗಿದೆ.

ವಿವಿಧ ಪಕ್ಷಗಳ ಕಾರ್ಯಕರ್ತರು, ಸಾಮಾಜಿಕ ಕಾರ್ಯಕರ್ತರು, ಕೆಲ ಜನಪ್ರತಿನಿಧಿಗಳು, ಆಸ್ಪತ್ರೆಗಳ ಸೇವೆಯಿಂದ ತೊಂದರೆ ಅನುಭವಿಸಿದ ನೂರರಷ್ಟು ಜನರು ಶನಿವಾರ ಸಂಜೆ ಸಭೆ ನಡೆಸಿ ವಿವಿಧ ರೀತಿ ಚರ್ಚೆ ನಡೆಸಿದ್ದಾರೆ.

ಮುಖ್ಯವಾಗಿ ಶಿರಸಿಯಲ್ಲಿರುವ ಕೆಲ ಆಸ್ಪತ್ರೆಗಳು ನಿಯಮದಂತೆ ನಡೆಯುತ್ತಿದೆಯೇ, ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಅವರ ಕೆಲಸದ ಅರ್ಹತೆ ಇದೆಯೇ, ಸೌಜನ್ಯರಹಿತ ವರ್ತನೆ ಏಲ್ಲೆಲ್ಲಿ ನಡೆಯುತ್ತಿದೆ, ಆಸ್ಪತ್ರೆಗಳಲ್ಲಿ ವಿವಿಧ ಚಿಕಿತ್ಸೆಗೆ ಇರುವ ಸಾಮಾನ್ಯ ದರಗಳು, ಶಿರಸಿ ಖಾಸಗಿ ಆಸ್ಪತ್ರೆಗಳಲ್ಲಿ ವಿಧಿಸುವ ದರಗಳ ಬಗ್ಗೆ ಚರ್ಚೆ ನಡೆದಿದೆ. ಅದರಲ್ಲೂ ಆಪರೇಶನ್ ದರಗಳು, ಇತರ ಚಿಕಿತ್ಸೆ ಹೆಸರಲ್ಲಿ ಬಡವರಿಗೆ ಆಗುವ ತೊಂದರೆಗಳ ಬಗ್ಗೆಯೂ ಚರ್ಚೆ ಆಗಿದೆ. ಕೆಲವರು ಶಿರಸಿ ತಾಲೂಕಿನಲ್ಲಿ ಬಡವರಿಗೆ ಆಗುವ ತೊಂದರೆಗಳ ಬಗ್ಗೆ ಸಭೆಯಲ್ಲಿ ಗಮನಸೆಳೆದಿದ್ದಾರೆ.

ಸಂಸದರ ವಿರುದ್ಧ ರಾಜ್ಯ ವೈದ್ಯರ ಸಂಘದ ಒತ್ತಡದ ಮೇಲೆ ಪ್ರಕರಣ ದಾಖಲಾದ ಬೆನ್ನಲ್ಲೇ ಸಮಾನ ಮನಸ್ಕರ ಸಭೆ ನಡೆದು, ಪ್ರಮುಖರ ಸಮಿತಿಯು ರಚಿಸಿರುವದು ವಿಶೇಷವಾಗಿದೆ. ಸದ್ಯ ಈ ಸಮಿತಿ ಆದಷ್ಟು ಮಾಹಿತಿ ಸಂಗ್ರಹ, ದೋಷಗಳ ಪತ್ತೆ ಮಾಡಲಿದ್ದು, ಅಗತ್ಯ ಬಿದ್ದಾಗ ಜನಜಾಗೃತಿ ಕಾರ್ಯಕ್ರಮ, ಹೋರಾಟ ಆಯೋಜಿಸುವ ಸಾಧ್ಯತೆ ಇದೆ. ಹೊಸ ಬೆಳವಣಿಗೆಯು ಶಿರಸಿ ಆರೋಗ್ಯ ಸೇವೆಯಲ್ಲಿ ಇನ್ನಷ್ಟು ಸುಧಾರಣೆ ಬರಲು ಅನುಕೂಲ ಆಗಬಹುದೆಂಬ ಚರ್ಚೆ ಇದ್ದರೂ ರಾಜಕೀಯ ಬಣ್ಣ ಬಂದರೆ ಕಷ್ಟವೆಂಬ ಮಾತು ಕೇಳಿಬಂದಿದೆ.