ಪರಿಶಿಷ್ಟರಿಗೆ ಕೃಷಿ ಭೂಮಿ ಮಂಜೂರಿಗೆ ಅಸಡ್ಡೆ

ವಿಶೇಷ ವರದಿ

ಮಂಗಳೂರು :  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನಸಂಖ್ಯೆ ಕಡಿಮೆ ಇದ್ದರೂ ಕೊರಗರು ಸೇರಿದಂತೆ ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿಯವರಿಗೆ ಕೃಷಿ ಜಮೀನು ಹಂಚಿಕೆ ಎಂಬುದು ಕೇವಲ ಘೋಷಣೆಯಲ್ಲಿ ಮಾತ್ರ ಉಳಿದಿದೆ.

ಅಧಿಕಾರ ಹೊಂದಿದ್ದ ರಾಜಕೀಯ ಪಕ್ಷಗಳ ಇಚ್ಛಾಶಕ್ತಿಯ ಕೊರತೆ ಮತ್ತು ಕಂದಾಯ ಇಲಾಖೆಯ ಕೆಳಹಂತದಲ್ಲಿ ಅಕ್ಟೋಪಸ್ ರೀತಿಯಲ್ಲಿ ಚಾಚಿರುವ ಲಂಚವಾತಾರದಿಂದಾಗಿ ಕೃಷಿ ಜಮೀನು ಹಕ್ಕು ಹೊಂದುವುದು ಪರಿಶಿಷ್ಟರಿಗೆ ಹಗಲು ಗನಸಾಗಿದೆ.

ಕರ್ನಾಟಕ ಭೂ ಕಂದಾಯ ಕಾಯಿದೆ ಪ್ರಕಾರ ಪರಿಶಿಷ್ಟರಿಗೆ ಭೂಮಿ ಮಂಜೂರು ಮಾಡಲು ಅವಕಾಶವಿದೆ. ಮಾತ್ರವಲ್ಲದೆ, ಇದೇ ಕಾಯಿದೆಯ ಸೆಕ್ಷನ್ 94, ಎ,ಬಿ,ಸಿ ಮತ್ತು ಸಿಸಿ ಪ್ರಕಾರ ಭೂಮಿ ಹಕ್ಕುಪತ್ರಕ್ಕಾಗಿ ಅರ್ಜಿಗಳನ್ನು ಸಲ್ಲಿಸಿರುವುದು ತೀರ ಕಡಿಮೆ ಪ್ರಮಾಣದಲ್ಲಿ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 53,527 ಪರಿಶಿಷ್ಟ ಕುಟುಂಬಗಳು ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿವೆ. ಇವರಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿದ ಶೇಕಡ 27ರಷ್ಟು ಕುಟುಂಬಗಳು ಸ್ವಂತ ಜಮೀನು ಹೊಂದುವ ಸೌಲಭ್ಯದಿಂದ ವಂಚಿತರಾಗಿದ್ದರೆ, ಪರಿಶಿಷ್ಟ ಜಾತಿಯವರಲ್ಲಿ ಶೇಕಡ 46ರಷ್ಟು ಕುಟುಂಬಗಳು ಜಮೀನು ಸಾಗುವಳಿ ಮಾಡುವ ಅವಕಾಶದಿಂದ ವಂಚಿತರಾಗಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭೂರಹಿತರಿಗೆ ಹಂಚಲು ಯೋಗ್ಯವಾದ ಲಕ್ಷಾಂತರ ಎಕರೆ ಜಮೀನು ಸರಕಾರದ ಬಳಿಯಲ್ಲಿದ್ದರೂ ಕನಿಷ್ಟ ತಮ್ಮ ಸ್ವಾಧೀನದಲ್ಲಿರುವ ಪರಿಶಿಷ್ಟರ ಜಮೀನು ಮಂಜೂರು ಮಾಡಿ ಹಕ್ಕು ಪತ್ರ ನೀಡುವ ಪ್ರಾಮಾಣಿಕ ಪ್ರಯತ್ನ ಜಿಲ್ಲೆಯಲ್ಲಿ ನಡೆದಿಲ್ಲ. ಜಿಲ್ಲೆಯ ರಾಜಕೀಯ ಪಕ್ಷಗಳಲ್ಲಿ ಹೆಸರಿಗೆ ಮಾತ್ರ ದಲಿತ ಮೋರ್ಚವೊ, ವಿಭಾಗವೊ ಇರುವ ಹೊರತಾಗಿ ರಾಜಕೀಯ ಪ್ರಾತಿನಿಧ್ಯ ಕೂಡ ಮೀಸಲಾಗಿಗಿಂತ ಮುಂದೆ ಹೋಗಿಲ್ಲ. ಅದೇ ರೀತಿಯಲ್ಲಿ ದಲಿತ ನಾಯಕರು ಎಂದು ಹೇಳಿಕೊಳ್ಳುವ ಮಂದಿ ಕೂಡ ಗ್ರಾಮೀಣ ಪ್ರದೇಶದ ಇಂತಹ ಭೂರಹಿತ ಕೃಷಿ ಕೂಲಿಕಾರ್ಮಿಕ ಪರಿಶಿಷ್ಟರ ಬಗ್ಗೆ ಯಾವುದೇ ಸ್ಪಂದನ ಹೊಂದಿಲ್ಲದಿರುವುದು ಈ ರೀತಿಯ ಅನ್ಯಾಯಕ್ಕೆ ಮತ್ತೊಂದು ಕಾರಣವಾಗಿದೆ.

ಜಿಲ್ಲೆಯಲ್ಲಿ ಸರಿಸುಮಾರು ಹನ್ನೊಂದು ಸಾವಿರ ಪರಿಶಿಷ್ಟ ಜಾತಿ ಕುಟುಂಬಗಳು ಸಣ್ಣ ಪ್ರಮಾಣದ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿವೆ. ಪೂರ್ಣಪ್ರಮಾಣದ ಕೃಷಿ ಚಟುವಚಿಕೆ ನಡೆಸಲು ಪರಿಶಿಷ್ಟರಲ್ಲಿರುವ ಕೃಷಿ ಭೂಮಿಯ ಪ್ರಮಾಣ ಕಡಿಮೆ ಇರುವುದು ಬಹುದೊಡ್ಡ ತೊಡಕಾಗಿದೆ. ಸರಕಾರದ ಕೃಷಿ ಸೌಲಭ್ಯಗಳನ್ನು ಪಡೆಯಲು ನಿರ್ದಿಷ್ಟ ಪ್ರಮಾಣದ ಕೃಷಿ ಜಮೀನು ಹೊಂದಿರಬೇಕು. ಆದರೆ, ಪರಿಶಿಷ್ಟರಿಗೆ ಕಡಿಮೆ ಪ್ರಮಾಣದಲ್ಲಿ ಜಮೀನು ಮಂಜೂರು ಮಾಡಲಾಗಿದೆ.

ಜಿಲ್ಲೆಯಲ್ಲಿ 13,111 ಪರಿಶಿಷ್ಟ ಪಂಗಡದ ಕುಟುಂಬಗಳಲ್ಲಿ 3,493 ಕುಟುಂಬಗಳು ಭೂ ವಂಚಿತವಾಗಿವೆ. ಇವರಲ್ಲಿ ಬಹುತೇಕ ಮಂದಿ ಅತ್ಯಂತ ಹಿಂದುಳಿದಿರುವ ಮತ್ತು ಸರಕಾರದಿಂದ ಹೆಚ್ಚಿನ ಮುತುವರ್ಜಿ ಹೊಂದಿರುವ ಕೊರಗ ಸಮುದಾಯವರಾಗಿದ್ದಾರೆ. ಕೊರಗರು ವಾಸಿಸುವ ಪ್ರದೇಶದಲ್ಲಿ ಸಾಕಷ್ಟು ಸರಕಾರಿ ಜಮೀನು ಇದ್ದರೂ ವರ್ಷಕ್ಕೆ ನಾಲ್ಕು ಕುಟುಂಬಗಳಿಗೆ ಜಮೀನು ಮಂಜೂರು ಮಾಡಿದ್ದರೂ ಸಾಕಷ್ಟು ಮಂದಿ ಕನಿಷ್ಟ ಜಮೀನು ಹೊಂದಿರುತ್ತಿದ್ದರು.

ಅದೇ ರೀತಿಯಲ್ಲಿ ಇನ್ನೊಂದೆಡೆ ಸರಕಾರದ ಅಧಿಕಾರಿಗಳು ಹಣದ ಕುಳಗಳಿಗೆ, ರಾಜಕೀಯ ಪ್ರಭಾವ ಹೊಂದಿರುವ ಶ್ರೀಮಂತ ಕೃಷಿಕರಿಗೆ ಒಂದೊಂದು ಕುಟುಂಬಕ್ಕೆ ಹೆಚ್ಚುವರಿಯಾಗಿ ಹತ್ತು ಎಕರೆ ಜಮೀನು ಮಂಜೂರು ಮಾಡಲು ಹೇಸದಿರುವುದು ಬುದ್ಧಿವಂತರು ಮತ್ತು ಸುಶಿಕ್ಷಿತರು ಎಂದು ಕರೆದುಕೊಳ್ಳುವ ಜಿಲ್ಲೆಗೆ ಅವಮಾನಕರವಾಗಿದೆ.

ರಾಜ್ಯದಲ್ಲೇ ಹೆಚ್ಚಿನ ಪ್ರಮಾಣದಲ್ಲಿ ಸರಕಾರಿ ಭೂಮಿ ಒತ್ತುವರಿ ಆಗಿರುವ ಜಿಲ್ಲೆಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಕೂಡ ಮೊದಲ ಸ್ಥಾನದಲ್ಲಿದೆ. ಲಕ್ಷಾಂತರ ಎಕರೆ ಸರಕಾರಿ ಜಮೀನು ಒತ್ತುವರಿ ಆಗಿದ್ದರೂ ಮರುಸ್ವಾಧೀನ ಪಡೆಯುವ ಪ್ರಕ್ರಿಯೆ ಜಿಲ್ಲೆಯಲ್ಲಿ ನಡೆದಿಲ್ಲ. ಖಾಸಗಿ ವ್ಯಕ್ತಿಗಳಿಗೆ ಒತ್ತುವರಿ ಮಾಡಲು ಸಾಕಷ್ಟು ಜಮೀನು ಇದ್ದರೂ ಪರಿಶಿಷ್ಟರಿಗೆ ಹಂಚಲು ಮಾತ್ರ ಭೂಮಿ ಇಲ್ಲದಿರುವುದು ವಿಪರ್ಯಾಸವೇ ಸರಿ.

ಈ ಮಧ್ಯೆ, ಸರಕಾರ ಹೊಸ ಯೋಜನೆ ತಂದು ಖಾಸಗಿಯವರಿಂದ ಭೂಮಿ ಖರೀದಿಸಿ ಪರಿಶಿಷ್ಟರಿಗೆ ಹಂಚುವ ಕೆಲಸ ಆರಂಭಿಸಿರುವುದು ಭ್ರಷ್ಟಚಾರಕ್ಕೆ ಮತ್ತೊಂದು ವ್ಯವಸ್ಥೆಯಾಗಿದೆ.