ಜನಪ್ರತಿನಿಧಿಗಳ ಬೇಜವಾಬ್ದಾರಿಯಿಂದ ಕೃಷಿ ಯೋಜನೆ ಮೊತ್ತ ನಷ್ಟ ಭೀತಿ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ನೀರಾವರಿ ಇಲಾಖೆ ಜಾರಿಗೊಳಿಸುವ ಪ್ರಧಾನಮಂತ್ರಿ ಕೃಷಿ ಸಂಚಯ ಯೋಜನೆ ಬದಿಯಡ್ಕಕ್ಕೆ ನಷ್ಟವಾಗುವ ಸಾಧ್ಯತೆಯಿದೆ. ಇದರಿಂದಾಗಿ ಲಕ್ಷಾಂತರ ರೂ ಕೇಂದ್ರ ನಿಧಿ ಬದಿಯಡ್ಕದ ಕೃಷಿ ವಲಯಕ್ಕೆ ನಷ್ಟವಾಗಲಿದೆ. ಯೋಜನೆ ಜಾರಿಗಾಗಿರುವ ವರದಿ ಸಲ್ಲಿಸುವ ಕೊನೆಯ ದಿನ ಕಳೆದರೂ ವರದಿ ಸಲ್ಲಿಸದಿರುವುದೇ ಯೋಜನೆ ನಷ್ಟಗೊಳ್ಳಲು ಕಾರಣ.

ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊಳ, ಕೆರೆ, ಅಣೆಕಟ್ಟು, ಹೊಳೆ, ತೋಡು ಬದಿಯ ತಡೆಗೋಡೆ, ಭತ್ತಕೃಷಿ ಭೂಮಿ ಸಂರಕ್ಷಣೆ ಸಹಿತ ವಿವಿಧ ಯೋಜನೆಗಳ ಜಾರಿಗೆ ಕೇಂದ್ರ ಕೃಷಿ ಇಲಾಖೆಯಿಂದ ನಿಧಿ ನೀಡಲಾಗುತ್ತಿದೆ. ಇದರಂತೆ ಯೋಜನೆ ಜಾರಿಗೊಳಿಸುವ ಪ್ರದೇಶದ ವರದಿಯನ್ನು ಕೃಷಿ ಭವನಗಳು ಈ ಹಿಂದೆಯೇ ನೀಡಿವೆ. ಆದರೆ ಇದರಲ್ಲಿ ಹೆಚ್ಚು ಒತ್ತು ನೀಡಬೇಕಾದ ಪ್ರದೇಶಗಳ ಅಂತಿಮ ಪಟ್ಟಿಯನ್ನು ಪಂಚಾಯತಿಯ ಅನುಮತಿಯೊಂದಿಗೆ ನೀಡಬೇಕೆಂದು ಜಿಲ್ಲಾಧಿಕಾರಿ ಆದೇಶಿಸಿದ್ದರು. ಅದರಂತೆ ಅಂತಿಮ ಪಟ್ಟಿ ಸಿದ್ಧಪಡಿಸಲು ಗ್ರಾಮ ಪಂಚಾಯತಿಗೆ ವಹಿಸಿಕೊಡಲಾಗಿತ್ತು. ಇದರಂತೆ ಕೆಲವು ವಾರ್ಡುಗಳ ಅಂತಿಮ ಪಟ್ಟಿಯೂ ಸಿದ್ಧವಾಯಿತು. ಕೇಂದ್ರ ನಿಧಿ ಎಂಬ ನೆಲೆಯಲ್ಲಿ ಕೆಲವು ಸದಸ್ಯರು ಉತ್ಸಾಹದಿಂದಲೇ ವರದಿ ಸಿದ್ಧಪಡಿಸಿದ್ದರು. ಆದರೆ ಉಳಿದ ಸದಸ್ಯರು ಈ ವರದಿ ಇನ್ನೂ ಸಿದ್ಧಪಡಿಸಿಲ್ಲ. ಈ ಹಿನ್ನೆಲೆಯಲ್ಲಿ ಅಂತಿಮ ದಿನವಾದ ಜ 5ರ ಮೊದಲು ಗ್ರಾಮ ಪಂಚಾಯತಿಯ ಅನುಮತಿಯೊಂದಿಗಿನ ವರದಿ ನೀಡಲು ಸಾಧ್ಯವಾಗಿಲ್ಲವೆಂದು ಕೃಷಿ ಭವನ ಮೂಲಗಳು ತಿಳಿಸಿವೆ.

ಅತೀ ಹೆಚ್ಚು ಕೊಳ, ಕೆರೆ, ಕೃಷಿ ಭೂಮಿ ಹೊಂದಿರುವ ಪ್ರದೇಶಗಳಲ್ಲಿ ಬದಿಯಡ್ಕವೂ ಒಂದಾಗಿದೆ. ಇಂತಹ ಕೃಷಿ ಪ್ರಾಧಾನ್ಯ ಯೋಜನೆ ಬದಿಯಡ್ಕದಲ್ಲಿ ಅನಿವಾರ್ಯವಾಗಿದೆ. ಆದರೆ ಜನಪ್ರತಿನಿಧಿಗಳ ಬೇಜವಾಬ್ದಾರಿತನದಿಂದ ಯೋಜನೆ ಕೈತಪ್ಪುವುದು ಖಂಡನೀಯವೆಂದು ಕೃಷಿಕರು ಹೇಳುತ್ತಿದ್ದಾರೆ.