ಎಸಿಬಿ ಬಲೆಗೆ ಬಿದ್ದ ಬೆಳ್ತಂಗಡಿ ಭ್ರಷ್ಟ ಅಧಿಕಾರಿಗಳ ನಿರೀಕ್ಷಣಾ ಜಾಮೀನು ಅರ್ಜಿ ವಜಾ

ಬಂಧನ ಭೀತಿ 

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಬೆಳ್ತಂಗಡಿ ತಾಲೂಕು ಕಚೇರಿಯ ಪ್ರಥಮ ದರ್ಜೆ ಸಹಾಯಕ ಗೋವಿಂದ ನಾಯ್ಕ ಮತ್ತು ಅವರ ಪತ್ನಿ ಪುಂಜಾಲಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ಸಹಾಯಕಿಯಾಗಿರುವ ಲೀಲಾವತಿ ಅವರು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ನಡೆಸಿದ್ದ ದಾಳಿ ವೇಳೆ ಸಿಕ್ಕಿಬಿದ್ದಿದ್ದು, ಆರೋಪಿಗಳು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ಮಂಗಳೂರಿನ ನ್ಯಾಯಾಲಯದಲ್ಲಿ ಇಂದು ವಿಚಾರಣೆಗೆ ಬಂದು ಜಾಮೀನು ವಜಾಗೊಂಡಿದೆ. ಈ ಮೂಲಕ ಇದೀಗ ಇವರಿಬ್ಬರಿಗೂ ಬಂಧನ ಭೀತಿ ಎದುರಾಗಿದೆ.

ಆರೋಪಿಗಳ ಕುರಿತ ಜಾಮೀನು ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾಯಾಲಯ, ದಂಪತಿಗಳು ನಿರೀಕ್ಷಣಾ ಜಾಮೀನಿಗೆ ಬಾಧ್ಯರಲ್ಲ ಎಂದು ಪ್ರಕಟಿಸಿ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ.

ಗೋವಿಂದ ನಾಯ್ಕ ಅವರ ಪತ್ನಿ ಲೀಲಾವತಿ ಅವರು ಸರಕಾರಿ ಇಲಾಖೆಯಲ್ಲಿ ಕೆಲಸ ಮಾಡುತ್ತಾ ವ್ಯಾಪಕ ಭ್ರಷ್ಠಾಚಾರ ಎಸಗಿದ್ದಾರೆ ಎನ್ನುವ ಆರೋಪ ವ್ಯಕ್ತವಾಗಿತ್ತು. ಭ್ರಷ್ಠಚಾರ ನಿಗ್ರಹ ದಳದ ಅಧಿಕಾರಿಗಳು 2016ರ ಡಿಸೆಂಬರ್ 21ರಂದು ಇವರ ನಿವಾಸಕ್ಕೆ ದಾಳಿ ನಡೆಸಿದ ಸಂದರ್ಭದಲ್ಲಿ ಆದಾಯಕ್ಕಿಂತ ಹೆಚ್ಚು ಆಸ್ತಿ ಪಾಸ್ತಿ ಇವರ ಬಳಿ ಪತ್ತೆಯಾಗಿತ್ತು. ಆರೋಪಿಗಳಿಬ್ಬರ ಬಳಿ ಸುಮಾರು 42,72,000 ರೂ ಹೆಚ್ಚುವರಿ ಆಸ್ತಿ ಪತ್ತೆಯಾಗಿತ್ತು.