ಬೆಳಗಾವಿ ಅಧಿವೇಶನದಲ್ಲಿ ಮೂಢನಂಬಿಕೆ ವಿರೋಧಿ ಮಸೂದೆ ಮಂಡನೆ ಅಸಂಭವ

ಬೆಳಗಾವಿ : ನವಂಬರ್ 13ರಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯಲಿದೆ. ಕಲಾಪದ ಹಿನ್ನೆಲೆಯಲ್ಲಿ ಬೆಳಗಾವಿ ಸುವರ್ಣ ಸೌಧದ ಸುತ್ತಲ ಪ್ರದೇಶದಲ್ಲಿ ಬಣ್ಣ ಹಚ್ಚುವ ಹಾಗೂ ಇತರ ದುರಸ್ತಿ ಕೆಲಸಗಳು ನಡೆಯುತ್ತಿವೆ. ಸ್ಥಳೀಯ ನಿರ್ವಹಣೆಗಾಗಿ ಸರ್ಕಾರ ಎರಡು ಕೋಟಿ ರೂ ಬಿಡುಗಡೆಗೊಳಿಸಿದೆ.

ಕಾನೂನು ಸಚಿವ ಜಯಚಂದ್ರ ಎರಡೂ ಸದನದಲ್ಲಿ ಕೆಲವು ಮಸೂದೆ ಮಂಡಿಸಲಿದ್ದು, ಈ ಬಾರಿಯೂ ಬಹು-ಚರ್ಚಿತ ಮೂಢನಂಬಿಕೆ ವಿರೋಧಿ ಕಾಯ್ದೆ ಮಂಡನೆಯಾಗುವ ಸಾಧ್ಯತೆ ಕ್ಷೀಣಿಸಿದೆ. ಸದನದಲ್ಲಿ ಟಿಪ್ಪು ಜಯಂತಿ ಮತ್ತು ಕಾಂಗ್ರೆಸ್ ಸರ್ಕಾರದ ವೈಫಲ್ಯಗಳ ಬಗ್ಗೆ ಬಿಜೆಪಿ ಪ್ರತಿಭಟಿಸಲಿದೆ.

ಬೆಳಗಾವಿ ಸುವರ್ಣ ಸೌಧದಲ್ಲಿ ಒಂದು ಅಧಿವೇಶನ ನಡೆಸಿದರೆ ಸಾಲದು. ಇಲ್ಲಿ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಕಚೇರಿ ತೆರೆದು, ಹಿರಿಯ ಅಧಿಕಾರಿಗಳನ್ನು ನಿಯುಕ್ತಿಗೊಳಿಸಬೇಕು. ಹಾಗಾದರೆ ಮಾತ್ರ ಉತ್ತರ ಕರ್ನಾಟಕದ ಮಂದಿಗೆ ಪ್ರಯೋಜನವಾಗಲಿದೆ ಎಂದು ಕನ್ನಡ ಸಂಘಟನೆಗಳ ಒಕ್ಕೂಟದ ಸಂಚಾಲಕ ಅಶೋಕ ಚಂದರ್ಗಿ ಹೇಳಿದ್ದಾರೆ.

ರಾಜ್ಯದ ಭಾಷಾ ರಾಜಕೀಯ ಹಿನ್ನೆಲೆಯಲ್ಲಿ ಸ್ಥಾಪನೆಯಾಗಿರುವ ಸುವರ್ಣ ಸೌಧದಿಂದ ಇದುವರೆಗೆ ಈ ಭಾಗದ ಮಂದಿಗೆ ಯಾವುದೇ ಪ್ರಯೋಜನವಾಗಿಲ್ಲ ಎಂಬ ಟೀಕೆಗಳೂ ಕೇಳಿ ಬಂದಿವೆ. ಇದಿಲ್ಲಿ ಸ್ಥಾಪನೆಯಾದ ಬಳಿಕ ಉತ್ತರ ಕರ್ನಾಟಕದ ಅಭಿವೃದ್ಧಿಯಾಗಿಲ್ಲ ಎಂದು ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಮುಖಂಡ ಮಾಲೋಜಿ ಅಸ್ತಿಕರ್ ಹೇಳಿದ್ದಾರೆ. ಬೆಳಗಾವಿ ಮತ್ತು ಸುತ್ತಲ ಕೆಲವು ಪ್ರದೇಶ ಮಹಾರಾಷ್ಟ್ರದೊಂದಿಗೆ ಸೇರಬೇಕೆಂದು ಎಂಇಎಸ್ ಆಂದೋಲನ ನಡೆಸುತ್ತಿದೆ.