ಜನವಿರೋಧಿಯಾಗಿರುವ ಐಕಳ ಪಂಚಾಯತ್

ಪಂಚಾಯತ್ ಸಭೆಯಲ್ಲಿ ಪಂಚಾಯತ್ ವ್ಯಾಪ್ತಿಯಲ್ಲಿನ ಸಮಸ್ಯೆ ಮಾತನಾಡಿದರೆ ಸುಮ್ಮನೆ ಕುಳಿತುಕೊಳ್ಳಲು ಸೂಚಿಸುತ್ತಿರುವ ಇಲ್ಲಿನ ಪಂಚಾಯತ್ ಅಧ್ಯಕ್ಷನÀ ಉದ್ದಟತನ ಮಿತಿ ಮೀರಿದ್ದು ಇವರನ್ನು ಆರಿಸಿ ಕಳುಹಿಸಿದ ತಪ್ಪಿಗೆ ಜನ ಪಶ್ಚಾತ್ತಾಪಪಡುವಂತಾಗಿದೆ. ಮೊದ ಮೊದಲು ವಿಪಕ್ಷದವರು ಸೇರಿದಂತೆ ಗ್ರಾಮಸ್ಥರು ಟೀಕಿಸುತ್ತಿದ್ದರೆ ಇದೀಗ ಬಿಜೆಪಿ ಪಕ್ಷದ ಕಾರ್ಯಕರ್ತರೇ ಪಂಚಾಯತ್ ಅಧ್ಯಕ್ಷನ ವಿರುದ್ಧ ಭ್ರಮ ನಿರಸನಗೊಂಡಿದ್ದೇವೆ ಎಂದು ಹೇಳಿಕೊಳ್ಳಲಾರಂಭಿಸಿದ್ದಾರೆ. ಪಂಚಾಯತಿ ವ್ಯಾಪ್ತಿಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಎದ್ದು ಕಾಣುತ್ತಿದ್ದು ಜವಾಬ್ದಾರಿಯುತ ಜನಪ್ರತಿನಿಧಿಗಳಿದ್ದೂ ಕೇಳುವವರಿಲ್ಲದಂತಾಗಿದೆ.

ಅಭಿವೃದ್ಧಿಯಲ್ಲಿ ಪಂಚಾಯತ್ ತುಂಬಾ ಹಿಂದೆ ಬಿದ್ದಿದ್ದರೂ ಅಕ್ರಮ ಮರಳುಗಾರಿಕೆಯಲ್ಲಿ ಎಲ್ಲರಿಗಿಂತ ಮುಂದಿದೆ. ಈ ಅಕ್ರಮಗಳಿಗೆ ಅಧ್ಯಕ್ಷರು ಪರೋಕ್ಷ ಬೆಂಬಲ ನೀಡುತ್ತಿರುವುದು ಗ್ರಾಮಸ್ಥರಿಗೆ ತಿಳಿಯದ ಸಂಗತಿಯೇನಲ್ಲ.

ರಾತ್ರಿ ಹಗಲೆನ್ನದೆ ನಡೆಯುತ್ತಿರುವ ಮರಳುಗಾರಿಕೆಯಿಂದ ಪಂಚಾಯತ್ ವ್ಯಾಪ್ತಿಯ ರಸ್ತೆಗಳೂ ಎಲ್ಲಿ ನೋಡಿದರೂ ಹೊಂಡಗಳೇ ತಂಬಿ ಧೂಳು ಹರಡಿಕೊಂಡಿದೆ. ಈ ಬಗ್ಗೆ ಪಂಚಾಯತ್ ಅಧ್ಯಕ್ಷರಿಗೆ ತಿಳಿಸಿದರೆ ಅವರು ಮೈಮೇಲೆ ಆವೇಶಬಂದಂತೆ ಎಗರಾಡುತ್ತಿರುತ್ತಾರೆ. ಆದ್ದರಿಂದ ಇನ್ನು ಉಳಿದಿರುವುದು ಪಂಚಾಯತ್ ಎದುರು ಪ್ರತಿಭಟನೆ ನಡೆಸಿ ಸಂಬಂಧಪಟ್ಟವರ ಅಧಿಕಾರಿಗಳ ಗಮನಕ್ಕೆ ತರುವುದೊಂದೇ.

  • ಗಣೇಶ್ ಶೆಟ್ಟಿ, ಐಕಳಬಾವ