ಬೆಂಗಳೂರಿನಲ್ಲಿ ಇನ್ನೊಂದು ಲೈಂಗಿಕ ಕಿರುಕುಳ ಪ್ರಕರಣ

ಯುವತಿಯ ನಾಲಿಗೆ ಕಚ್ಚಿರುವುದು

ಬೆಂಗಳೂರು : ಹೊಸವರ್ಷಾಚರಣೆಯ ಸಂದರ್ಭದಲ್ಲಿ ಬೆಂಗಳೂರಿನ ಎಂ ಜಿ ರಸ್ತೆಯಲ್ಲಿ ನಡೆದಿದೆಯೆನ್ನಲಾದ ಸಾಮೂಹಿಕ ಲೈಂಗಿಕ ಕಿರುಕುಳ ಹಾಗೂ ಕಮ್ಮನಹಳ್ಳಿ ಪ್ರಕರಣದ ನಂತರ  ಶುಕ್ರವಾರ ಇಂತಹುದೇ ಇನ್ನೊಂದು ಪ್ರಕರಣ ಬೆಂಗಳೂರಿನಲ್ಲಿ ಸಾಕಷ್ಟು ಸುದ್ದಿಯಾಗಿದೆ.

ಯುವತಿಯೊಬ್ಬಳು ನಗರದ ಕೆ ಜಿ ಹಳ್ಳಿಯ ಗೋವಿಂದಪುರ ಸರ್ಕಲ್ಲಿನತ್ತ ಬಸ್ ಹತ್ತಲು ಬೆಳಿಗ್ಗೆ 6.30ರ ಹೊತ್ತಿಗೆ ನಡೆದುಕೊಂಡು ಹೋಗುತ್ತಿದ್ದಾಗ ಆಕೆಯ ಬಳಿ ಬಂದ ಆಗಂತುಕನೊಬ್ಬ ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆನ್ನಲಾಗಿದ್ದು ಆಕೆ ಬೊಬ್ಬಿಟ್ಟಾಗ ಅಲ್ಲಿಂದ ಓಡಿ ಹೋದನೆಂದು ಹೇಳಲಾಗಿದೆ.

ಯುವತಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಒದಗಿಸಲಾಗಿದೆ. ಘಟನೆಯ ಸಂಬಂಧದ ಸೀಸಿಟೀವಿ ದೃಶ್ಯಾವಳಿಯು ಸಮೀಪದ ಟೀ ಅಂಗಡಿಯೊಂದರಲ್ಲಿ ಅಳವಡಿಸಲಾಗಿದ್ದ ಕ್ಯಾಮರಾವೊಂದರಲ್ಲಿ ಪತ್ತೆಯಾಗಿದ್ದು,  ಅದರಲ್ಲಿ ಆರೋಪಿ ಯುವತಿಯನ್ನು  ಹಿಂಬಾಲಿಸುತ್ತಿರುವ ದೃಶ್ಯವಿದೆಯಾದರೂ ಲೈಂಗಿಕ ಕಿರುಕುಳ ನೀಡಲಾದ ಸ್ಥಳ ಕಾಣುತ್ತಿಲ್ಲ. ಯುವತಿಯ ಬೊಬ್ಬೆ ಕೇಳಿ ಸ್ಥಳೀಯರು ಧಾವಿಸಿ ಬಂದಿದ್ದರಾದರೂ ಅಷ್ಟೊತ್ತಿಗಾಗಲೇ ಆ ವ್ಯಕ್ತಿ ಅಲ್ಲಿಂದ ಕಾಲ್ಕಿತ್ತಿದ್ದ. ಯುವತಿ ಬಾಣಸವಾಡಿ ನಿವಾಸಿಯಾಗಿದ್ದು ಹಿಂದಿನ ರಾತ್ರಿ ಎಚ್ ಬಿ ಆರ್ ಲೇಔಟಿನಲ್ಲಿರುವ ಸಂಬಂಧಿಕರ ಮನೆಗೆ ಬಂದಿದ್ದಳು ಹಾಗೂ ತನ್ನ ಉದ್ಯೋಗ  ಸ್ಥಳಕ್ಕೆ 7 ಗಂಟೆಗೆ ತಲುಪಬೇಕಾಗಿದ್ದ ಕಾರಣ 6.30ಕ್ಕೇ ಮನೆಯಿಂದ ಹೊರಬಿದ್ದಿದ್ದಳು.