ಇಸ್ಲಾಮಿಕ್ ಉಗ್ರರಿಗೆ ಮಾರಾಟವಾಗಲಿದ್ದ ಪತ್ನಿ

ಸಾಂದರ್ಭಿಕ ಚಿತ್ರ

ಕೇರಳದಲ್ಲಿ ಇನ್ನೊಂದು ಲವ್ ಜಿಹಾದ್ ಪ್ರಕರಣ

ಸುಪ್ರೀಂ ಕದ ತಟ್ಟಿದ ಸಂತ್ರಸ್ತೆ

ವಿಶೇಷ ವರದಿ

ಕಾಸರಗೋಡು : ಹಾದಿಯಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಇನ್ನಷ್ಟೇ ಹೊರಬರಬೇಕಿರುವಾಗ ಕೇರಳದಿಂದ ಇನ್ನೊಂದು ಶಂಕಿತ ಲವ್ ಜಿಹಾದ್ ಪ್ರಕರಣ ವರದಿಯಾಗಿ ಸಾಕಷ್ಟು ಕುತೂಹಲ ಮೂಡಿಸಿದೆ. ತನ್ನನ್ನು ಬಲವಂತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಿಸಲಾಗಿದೆ, ವಂಚನೆಯ ಮೂಲಕ ವಿವಾಹ ಮಾಡಿಸಲಾಗಿದೆ ಹಾಗೂ ಲೈಂಗಿಕವಾಗಿ ಶೋಷಿಸಲಾಗಿದೆ ಎಂದು ಆರೋಪಿಸಿ ಕೇರಳದ ಅಕ್ಷರ ಬೋಸ್ ಎಂಬ 25ರ ಯುವತಿ ಸುಪ್ರೀಂ ಕೋರ್ಟಿನ ಕದ ತಟ್ಟಿದ್ದಾಳೆ. ತನ್ನ ಪತಿ ತನ್ನನ್ನು ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಗೆ ಮಾರಾಟ ಮಾಡುವ ಯತ್ನವನ್ನೂ ನಡೆಸಿದ್ದ ಎಂದು ಆಕೆ ಹೇಳಿಕೊಂಡಿದ್ದಾಳೆ.

ಸಂತ್ರಸ್ತೆ ಕೇರಳದ ಹಿಂದೂ ಈಳವ ಕುಟುಂಬಕ್ಕೆ ಸೇರಿದವಳಾಗಿದ್ದು  ತನ್ನ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಏಜನ್ಸಿ ಮೂಲಕ ತನಿಖೆ ನಡೆಸಬೇಕೆಂದು ಕೋರಿದ್ದಾಳೆ.

2014ರಲ್ಲಿ ತನಗೆ ಕಾಲೇಜಿನಲ್ಲಿ ಪರಿಚಯವಾಗಿದ್ದ ಸಜ್ಜದ್ ರಹಾಂ ಜತೆ ಪ್ರೇಮಾಂಕುರವಾದ ನಂತರ ಆತ ತನ್ನೊಡನೆ ದೈಹಿಕ ಸಂಪರ್ಕ ಬೆಳೆಸಿ ಅದನ್ನು ತನ್ನ ಫೋನಿನಲ್ಲಿ ಚಿತ್ರೀಕರಿಸಿ ಆ ಮೂಲಕ ತನ್ನನ್ನು ಬ್ಲ್ಯಾಕ್ಮೇಲ್ ಮಾಡಿ ತನ್ನನ್ನು ಬಲವಂತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಿಸಿ ಕಳೆದ ವರ್ಷದ ಮೇ ತಿಂಗಳಲ್ಲಿ ವಿವಾಹವಾಗಿದ್ದ, ಈ ಸಂದರ್ಭದಲ್ಲಿ ಬೆಂಗಳೂರಿನ ವಿವಾಹ ನೋಂದಣಿ ಅಧಿಕಾರಿಯೊಬ್ಬರೂ ಆತನಿಗೆ ಸಹಾಯ ಮಡಿದ್ದರು ಎಂದು ಆಕೆ ದೂರಿದ್ದಾಳೆ.  ಆಗಸ್ಟ್ 2017ರಲ್ಲಿ ಆತ ತನ್ನನ್ನು ಸೌದಿ ಅರೇಬಿಯಾದ ಜೆಡ್ಡಾಗೆ ಕರೆದುಕೊಂಡು ಹೋದ ನಂತರ ತನ್ನನ್ನು ಲೈಂಗಿಕ ಗುಲಾಮಳನ್ನಾಗಿಸಿದ್ದನ್ನಲ್ಲದೆ ಬಲವಂತವಾಗಿ  ವಿವಾದಿತ ಇಸ್ಲಾಂ ಧರ್ಮ ಪ್ರಚಾರಕ ಝಕೀರ್ ನಾಯ್ಕನ ಮತ್ತಿತರ ಐ ಎಸ್ ವೀಡಿಯೋ ನೋಡಲು ಬಲವಂತಪಡಿಸುತ್ತಿದ್ದ, ಆತನ ತಾಯಿ ಕೂಡ ಆತನ ಜತೆ ಶಾಮೀಲಾಗಿದ್ದು ವ್ಯಕ್ತಿಯೊಬ್ಬನನ್ನು ಇಸ್ಲಾಂ ಧರ್ಮಕ್ಕೆ ಮತಾಂತರಿಸಿದ ಬಳಿಕ ಕುಟುಂಬಕ್ಕೆ ಸಾಕಷ್ಟು ಚಿನ್ನ ಮತ್ತು ನಗದು ಎಲ್ಲಿಂದಲೋ ದೊರಕಿತ್ತು ಎಂದು ಆಕೆ ದೂರಿದ್ದಾಳೆ.

ತನ್ನ ಪತಿ ತನ್ನನ್ನು ಐ ಎಸ್ ಸಂಘಟನೆಗೆ ಮಾರಾಟ ಮಾಡುವ ಉದ್ದೇಶದಿಂದ ಸಿರಿಯಾಗೆ ತೆರಳಲು ಸಿದ್ಧತೆ ನಡೆಸುತ್ತಿದ್ದಂತೆಯೇ ಅಹ್ಮದಾಬಾದ್ ನಗರಕ್ಕೆ ಪ್ರಯಾಣಿಸಲು ತನ್ನ ತಂದೆ ಕಳುಹಿಸಿದ ಟಿಕೆಟ್ ಸಹಾಯದೀಂದ  ಅಕ್ಟೋಬರ್ 3, 2017ರಂದು ಅಲ್ಲಿಂದ ತಪ್ಪಿಸಿ ಅಕ್ಟೋಬರ್ 5ಕ್ಕೆ ಭಾರತ ತಲುಪಿದೆ ಎಂದು ಆಕೆ ವಿವರಿಸಿದ್ದಾಳೆ.

ತನ್ನ ಪತಿ ಪಿಎಫ್‍ಐ ಸದಸ್ಯನೂ ಆಗಿದ್ದು ತನ್ನ ಆಧಾರ್ ಕಾರ್ಡ್ ಹಾಗೂ ಪಾಸ್ ಪೋರ್ಟಿನಲ್ಲಿನ ವಿವರಗಳನ್ನು ತಿರುಚಿ ತನ್ನ ತಂದೆ ತಾಯಿಗೂ ತನಗೂ ಸಂಬಂಧವೇ ಇಲ್ಲದಂತೆ ಮಾಡಿದ್ದಾನೆ ಎಂದೂ ಆಕೆ ಆರೋಪಿಸಿದ್ದಾಳೆ.