ಗಾಂಧಿ ಹತ್ಯೆಯ ಮರುತನಿಖೆ ಸುಳ್ಳು ಸಾಬೀತುಪಡಿಸುವ ಮತ್ತೊಂದು ಯತ್ನ

ಇತಿಹಾಸವನ್ನು ವ್ಯವಸ್ಥಿತವಾಗಿ ತಿರುಚಿರುವ ಕ್ಷುದ್ರ ಶಕ್ತಿಗಳೇ ಈ ಸಾಹಸಕ್ಕೂ ಕೈಹಾಕಿದ್ದು, ಸಮಕಾಲೀನ ಇತಿಹಾಸವನ್ನೂ ವಿಕೃತಗೊಳಿಸಲು ಮುಂದಾಗಿವೆ.

  • ತುಷಾರ್ ಎ ಗಾಂಧಿ

ಗಾಂಧೀಜಿಯ ಹತ್ಯೆ ಕುರಿತಂತೆ ಸುಳ್ಳು ಸುದ್ದಿಗಳನ್ನು ಹರಡಿ ಗೊಂದಲ ಸೃಷ್ಟಿಸುವ ಪ್ರಯತ್ನ ನಡೆಯುತ್ತಿರುವುದು ಇದೇ ಮೊದಲ ಸಲವೇನಲ್ಲ. ಗಾಂಧೀಜಿಯನ್ನು ಹತ್ಯೆ ಮಾಡಿದ ನಾತುರಾಂ ಗೋಡ್ಸೆಗೆ ಪ್ರೇರಣೆ ಮತ್ತು ಪ್ರಚೋದನೆ ನೀಡಿದ ಸಿದ್ಧಾಂತ ಹತ್ಯೆಯನ್ನು ಸಮರ್ಥಿಸಿಕೊಳ್ಳಲು ಸತತ ಪ್ರಯತ್ನ ಮಾಡುತ್ತಲೇ ಇದೆ. ದಶಕಗಳ ಕಾಲ ಹರಡಲಾಗುತ್ತಿರುವ ಈ ಮಿಥ್ಯೆಗಳನ್ನು ಬಹುತೇಕ ಜನತೆ ಒಪ್ಪಿರಲೂ ಸಾಕು. ಈಗ ಹತ್ಯೆಯ ಬಗ್ಗೆಯೇ ಅನುಮಾನಗಳನ್ನು ಸೃಷ್ಟಿಸಲು ಮುಂದಾಗಿದ್ದಾರೆ.

ಈ ನಿಟ್ಟಿನಲ್ಲಿ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಲಾಗಿದ್ದು, ಗಾಂಧಿ ಹತ್ಯೆಯ ಮರುತನಿಖೆಗೆ ಆಗ್ರಹಿಸಲಾಗಿದೆ. ಸುಪ್ರೀಂಕೋರ್ಟ್ ಅಮಿಕಸ್ ಕ್ಯೂರಿ ನೇಮಿಸಿ ವಿಚಾರಣೆ ನಡೆಸುತ್ತಿದೆ. ಕಳೆದ ವರ್ಷ ಮುಂಬಯಿ ಹೈಕೋರ್ಟಿನಲ್ಲಿ ಅಭಿನವ ಭಾರತ್ ಸಂಸ್ಥೆಯ ಪಂಕಜ್ ಫಡ್ನಿಸ್ ಸಲ್ಲಿಸಿದ ಅರ್ಜಿಯಲ್ಲಿ ಗಾಂಧೀಜಿಯನ್ನು ಹತ್ಯೆ ಮಾಡುವಾಗ ಮತ್ತೊಬ್ಬ ಕೊಲೆಗಾರ ಇದ್ದ ಎಂದು ಹೇಳಿದ್ದರೂ, ಕೋರ್ಟ್ ಅರ್ಜಿಯನ್ನು ತಿರಸ್ಕರಿಸಿತ್ತು. ಗಾಂಧಿ ಹತ್ಯೆಯಲ್ಲಿ ಅರೆಸ್ಸೆಸ್ ಕೈವಾಡ ಮತ್ತು ವೀರಸಾವರ್ಕರ್ ಅವರ ಪಿತೂರಿ ಇರುವುದನ್ನು ಕಾನ್ಪುರ ಆಯೋಗ ತನ್ನ ವರದಿಯಲ್ಲಿ ಸ್ಪಷ್ಟಪಡಿಸಿತ್ತು. ಆಗಿನಿಂದಲೂ ಈ ಆಯೋಗದ ವರದಿ ಸಂಘಪರಿವಾರದ ನಿದ್ದೆ ಕೆಡಿಸುತ್ತಿದೆ.

ಸುಪ್ರೀಂಕೋರ್ಟಿಗೆ ಸಲ್ಲಿಸಿರುವ ಅರ್ಜಿಯಲ್ಲಿ ಗಾಂಧಿಯನ್ನು ಹತ್ಯೆ ಮಾಡಿದ್ದು, ಆ ಸಂದರ್ಭದಲ್ಲಿ ಅಲ್ಲಿಯೇ ಇದ್ದ ಮತ್ತೊಬ್ಬ ಹಂತಕ ಎಂದು ವಾದಿಸಲಾಗಿದೆ. ಎರಡೂವರೆ ಅಡಿ ಅಂತರದಲ್ಲಿ ನಿಂತು ಗಾಂಧೀಜಿಯ ಎದೆಗೆ ಮೂರು ಗುಂಡುಗಳನ್ನು ಹೊಡೆದು ಕೊಲೆ ಮಾಡಿದ ಗೋಡ್ಸೆಯ ಬುಲೆಟುಗಳು ಗಾಂಧಿಯನ್ನು ಕೊಲ್ಲಲಿಲ್ಲ, ಅಲ್ಲಿಯೇ ನೆರೆದಿದ್ದ ಮತ್ತೊಬ್ಬ ಈ ಹತ್ಯೆ ಮಾಡಿದ್ದಾನೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಈ ನಾಲ್ಕನೆಯ ಬುಲೆಟ್ ಕುರಿತಂತೆ ತನಿಖೆ ನಡೆಸಲು ಅರ್ಜಿದಾರರು ಆಗ್ರಹಿಸಿದ್ದಾರೆ.

ಗಾಂಧೀಜಿಯ ಅಂತ್ಯ ಸಂಸ್ಕಾರದ ವೇಳೆ ಶಾಲುವಿನಲ್ಲಿ ಮರೆಯಾಗಿದ್ದ ಬುಲೆಟ್ ದೊರೆತಿದ್ದು, ಇದರಿಂದಲೇ ಗಾಂಧಿ ಮೃತಪಟ್ಟಿದ್ದಾರೆ ಎಂಬ ಸಾಕ್ಷಿಯೊಬ್ಬರ ಹೇಳಿಕೆಯೇ ಈ ಅರ್ಜಿಗೆ ಮೂಲವಾಗಿದೆ. ಆದರೆ ಗಾಂಧಿ ಹತ್ಯೆ ಕುರಿತಂತೆ ಸಮಗ್ರ ತನಿಖೆಯ ನಂತರ ಸಲ್ಲಿಸಲಾದ ವರದಿಯಲ್ಲಿ ಎಲ್ಲ ಅಂಶಗಳೂ ಸ್ಪಷ್ಟವಾಗಿದ್ದು, ಸುಳ್ಳು ಸೃಷ್ಟಿಸುವವರಿಗೆ ಇದು ಅಪಥ್ಯವಾಗಿದೆ. ಈಗ ಅಧಿಕಾರ ರಾಜಕಾರಣದ ನಿಕಟವಾಗಿರುವ ಕೆಲವು ಶಕ್ತಿಗಳು ಸತ್ಯವನ್ನು ಮರೆಮಾಚಲು ಯತ್ನಿಸುತ್ತಿದ್ದು, ಇತಿಹಾಸವನ್ನು ಪುನಃ ರಚಿಸಲು ಸಿದ್ಧತೆ ನಡೆಸಿವೆ. ಇತಿಹಾಸವನ್ನು ವ್ಯವಸ್ಥಿತವಾಗಿ ತಿರುಚಿರುವ ಕ್ಷುದ್ರ ಶಕ್ತಿಗಳೇ ಈ ಸಾಹಸಕ್ಕೂ ಕೈಹಾಕಿದ್ದು, ಸಮಕಾಲೀನ ಇತಿಹಾಸವನ್ನೂ ವಿಕೃತಗೊಳಿಸಲು ಮುಂದಾಗಿವೆ.