ಸಮಾಜದ ಅಭಿವೃದ್ಧಿಗೆ ದುಡಿಯಲು ಅಣ್ಣಾ ಕರೆ

ನಮ್ಮ ಪ್ರತಿನಿಧಿ ವರದಿ

ಉಡುಪಿ : ಸಮಾಜದ ಅಭಿವೃದ್ಧಿಗಾಗಿ ಜನರು ತಮ್ಮ ಅಗತ್ಯಗಳನ್ನು ಮತ್ತು ಆಸೆಗಳನ್ನು ತ್ಯಾಗ ಮಾಡಲು ಕಲಿಯಬೇಕೆಂದು ಹಿರಿಯ ಸಾಮಾಜಿಕ ನಾಯಕ ಅಣ್ಣಾ ಹಜಾರೆ ಹೇಳಿದ್ದಾರೆ.

ಬೆಂಗಳೂರಿನ ಋಷಿ ಸಂಸ್ಕøತಿ ವಿದ್ಯಾಟ್ರಸ್ಟ್ ಹಾಗೂ ಸಿದ್ಧ ಸಮಾಜ ಯೋಗದ ಜಂಟಿ ಆಶ್ರಯದಲ್ಲಿ ಶ್ರೀ ಕೃಷ್ನ ಮಠದ ರಾಜಾಂಗಣದಲ್ಲಿ ನಡೆದ ವಿಶ್ವ ಹೃದಯ ಸಮ್ಮೇಳನ 2016ರ ವಿಡಿಯೋ ಸಂದೇಶದಲ್ಲಿ ಅವರು ಈ ಮಾತುಗಳನ್ನು ಹೇಳಿದರು. ಅನಾರೋಗ್ಯದ ನಿಮಿತ್ತ ಕಾರ್ಯಕ್ರಮಕ್ಕೆ ಗೈರು ಹಾಜರಾಗಿದ್ದ ಅವರ ವಿಡಿಯೋ ಸಂದೇಶವನ್ನು ಸಮ್ಮೇಳನದಲ್ಲಿ ಬಿತ್ತರಿಸಲಾಯಿತು.

“ಜನತೆ ಯಾವಾಗಲೂ ಸರಿಯಾದ ಮಾರ್ಗದಲ್ಲೇ ನಡೆಯಬೇಕು. ಅವರ ಮನಸ್ಸಿನೊಳಗೆ ಯಾವತ್ತೂ ತುಮುಲಗಳು ಇರಬಾರದು. ಅವರ ಕಾರ್ಯವೈಖರಿ, ಗುಣನಡತೆಯಲ್ಲಿ ಅಪನಿಂದೆ ಇರಕೂಡದು. ಪ್ರಶಸ್ತಿಗಾಗಿ ಯಾವುದೇ ಕೆಲಸವನ್ನೂ ಮಾಡಕೂಡದು. ಪ್ರಶಸ್ತಿ ನಮ್ಮನ್ನು ಅರಸಿಕೊಂಡು ಬರಬೇಕು. ಸಮಾಜಕ್ಕೆ ಅರ್ಪಣಾ ಮನೋಭಾವನೆಯಿಂದ ಕೆಲಸ ಮಾಡುವ ಸಂದರ್ಭದಲ್ಲಿ ಎದುರಾಗುವ ನಿಂದನೆಗಳನ್ನು ಎದುರಿಸಲು ಸದಾ ಸಿದ್ಧರಿರಬೇಕು” ಎಂದು ಅಣ್ಣಾ ಹಜಾರೆ ನುಡಿದರು.

“ಯಾವುದೇ ಯಶಸ್ಸಿಗೆ ಮೊದಲು ನಮ್ಮ ಮನೋಬಲವನ್ನು ವೃದ್ಧಿಸಿಕೊಳ್ಳಬೇಕು. ಹಲವು ಬಾರಿ ಮನುಷ್ಯರು ತಮ್ಮ ಸಹನೆಯನ್ನು ಕಳೆದುಕೊಂಡು ಬಿಡುತ್ತಾರೆ” ಎಂದರು.  “ಯೋಗ, ಧ್ಯಾನದ ಮೂಲಕ ಯುವಜನತೆ ತಮ್ಮ ಮನೋಬಲವನ್ನು ಗಟ್ಟಿಗೊಳಿಸಬೇಕು. ನಾವು ನಮ್ಮೊಳಗಿನ ಖುಷಿಯನ್ನು ತ್ಯಾಗ ಮಾಡಿ, ಅನ್ಯರ ಖುಷಿಯಲ್ಲಿ ನಮ್ಮ ಖುಷಿ ಕಾಣಬೇಕು” ಎಂದವರು ಸಲಹೆ ನೀಡಿದರು.